ಹೈದರಾಬಾದ್: ತೆಲಂಗಾಣದ ಯಾದಾದ್ರಿ-ಭುವನಗಿರಿ ಜಿಲ್ಲೆಯ ಔಷಧ ಘಟಕವೊಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 10:30ರ ವೇಳೆಗೆ ಪೊಚಂಪಲ್ಲಿ ಮಂಡಲದ ದೋತಿಗುಡೆಂ ಗ್ರಾಮದ ಹೊರವಲಯದಲ್ಲಿರುವ ಹ್ಯಾಜೆಲೋ ಲ್ಯಾಬ್ ಪ್ರೈ.ಲಿ ಕಂಪನಿಯಲ್ಲಿ ಈ ಘಟನೆ ನಡೆದಿದೆ. 9 ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಫೋಟದ ಭಾರೀ ಶಬ್ದ ಕೇಳಿ ಸ್ಥಳೀಯ ನಿವಾಸಿಗಳು ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಲಭ್ಯವಾದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ಸ್ಫೋಟದ ಬಳಿಕ ಕಂಪನಿಯ ಆವರಣದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಆವರಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ನೀರಿನ ಪೈಪ್ಗಳ ಮೂಲಕ ಬೆಂಕಿ ನಿಯಂತ್ರಿಸಲು ಹರಸಾಹಸಪಟ್ಟಿದ್ದು, ರಕ್ಷಣಾ ಸಿಬ್ಬಂದಿ ಹಾಗೂ ಕಾರ್ಮಿಕರು ಕೂಡ ಕಾರ್ಯಾಚರಣೆಗೆ ಸಹಕರಿಸಿದರು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಫಾರ್ಮಾ ಕಂಪನಿಯಲ್ಲಿದ್ದ ರಿಯಾಕ್ಟರ್ ಸ್ಫೋಟಗೊಂಡಿರುವ ಸಾಧ್ಯತೆಯನ್ನು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆದರೆ ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ದೃಢಪಟ್ಟಿಲ್ಲ. ಸ್ಫೋಟ ಸಂಭವಿಸಿದ ಸ್ಥಳ, ರಿಯಾಕ್ಟರ್ನ ಸ್ಥಿತಿ ಹಾಗೂ ಕಂಪನಿಯಲ್ಲಿ ಕೈಗೊಳ್ಳಲಾಗಿದ್ದ ಸುರಕ್ಷತಾ ಕ್ರಮಗಳ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.



