ಮಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ, ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದೈವದ ಮೊರೆ ಹೋಗಿದ್ದಾರೆ.
ಮಂಗಳೂರಿನ ಶ್ರೀಕ್ಷೇತ್ರ ಮಂದಾರಬೈಲು ಶ್ರೀರಕ್ತೇಶ್ವರಿ ಮಂತ್ರದೇವತಾ ಹಾಗೂ ಗುಳಿಗ ದೈವದ ಸನ್ನಿಧಿಗೆ ಭೇಟಿ ನೀಡಿದ ವಿಜಯಲಕ್ಷ್ಮಿ, ವಿಶೇಷ ಸೇವೆ ಹಾಗೂ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಕೋಲ ಸೇವೆ ನಡೆಸಿ ಹರಕೆ ಸಲ್ಲಿಸಿದ್ದು, ದರ್ಶನ್ ಅವರ ಮೇಲಿರುವ ಪ್ರಕರಣದ ಸಂಕಷ್ಟದಿಂದ ಪಾರಾಗಲು ದೈವಾನುಗ್ರಹ ಕೋರಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿ ದರ್ಶನ್ ಪ್ರಕರಣದಲ್ಲಿ ಮಹತ್ವ ಪಡೆದುಕೊಂಡಿದೆ. ಪ್ರದೋಷ್ ಮಾಫಿ ಸಾಕ್ಷಿಯಾದರೆ ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಹೊಸ ಬೆಳವಣಿಗೆಗಳಿಗೆ ಕಾರಣವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಆ.24ಕ್ಕೆ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ:
ಪ್ರದೋಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯ ಆದೇಶವನ್ನು 59ನೇ ಸೆಷನ್ಸ್ ಕೋರ್ಟ್ ಆ.24ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಮುಂದಿನ ಬೆಳವಣಿಗೆಯತ್ತ ಎಲ್ಲರ ಗಮನ ನೆಟ್ಟಿದೆ.
ಪ್ರದೋಷ್ ಅವರ ಅಪರಾಧ ಹಿನ್ನೆಲೆಯ ಕುರಿತು ಕಾಮಾಕ್ಷಿಪಾಳ್ಯ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಹೊರತುಪಡಿಸಿ ಪ್ರದೋಷ್ ವಿರುದ್ಧ ಬೇರೆ ಯಾವುದೇ ಪ್ರಕರಣಗಳಿಲ್ಲ ಎಂದು ಎಸಿಪಿ ವರದಿಯಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಜೈಲಿನಲ್ಲಿದ್ದ ಅವಧಿಯಲ್ಲಿ ಪ್ರದೋಷ್ ಅವರ ನಡವಳಿಕೆ ಹೇಗಿತ್ತು ಎಂಬ ಬಗ್ಗೆಯೂ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಈ ಎಲ್ಲ ಮಾಹಿತಿಗಳನ್ನು ಪರಿಗಣಿಸಿದ ಬಳಿಕ ನ್ಯಾಯಾಲಯ ಮಾಫಿ ಸಾಕ್ಷಿ ಅರ್ಜಿಯ ಕುರಿತು ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.
ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಪ್ರದೋಷ್ ಮಾಫಿ ಸಾಕ್ಷಿಯಾಗಲು ಅವಕಾಶ ಸಿಗುತ್ತದೆಯೇ ಎಂಬುದು ಆ.24ರಂದು ನಡೆಯಲಿರುವ ವಿಚಾರಣೆಯಲ್ಲಿ ಸ್ಪಷ್ಟವಾಗಲಿದೆ.



