ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಾದಕ ವಸ್ತು ಸೇವನೆ ನಾಗರಿಕ ಸಮಾಜದ ದುರಂತವಾಗಿದ್ದು, ನಾಡಿನ ಆಸ್ತಿ ಎಂದು ಕರೆಯಲ್ಪಡುವ ಯುವಕರೇ ಇದರ ಕರಾಳ ಛಾಯೆಗೆ ಹೆಚ್ಚು ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಾದಕ ವಸ್ತುಗಳ ಸೇವನೆ ಒಂದು ರೀತಿಯ ಮಾನಸಿಕ ದಾಸ್ಯವಾಗಿದ್ದು, ವಿದ್ಯಾರ್ಥಿಗಳು ಇದರ ಆಕರ್ಷಣೆಗೆ ಒಳಗಾಗಬಾರದು ಎಂದು ಸೋನಿಯಾ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎಚ್.ವಿ. ಡಂಬಳ ಹೇಳಿದರು.
ಸಂಗೊಳ್ಳಿ ರಾಯಣ್ಣ ನಗರದ ಸೋನಿಯಾ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ವತಿಯಿಂದ ‘ಮಾದಕ ವಸ್ತು ದುರ್ಬಳಕೆ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ’ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಅಪಾರ ಶಕ್ತಿಯಿದ್ದು, ದೇಶದ ಸಮಗ್ರ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಒಮ್ಮೆ ಮಾದಕ ವಸ್ತುಗಳ ಆಕರ್ಷಣೆಗೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಜವಾಬ್ದಾರಿಯಿಂದ ಬಳಸಬೇಕು. ಆರೋಗ್ಯಕ್ಕೆ ಆದ್ಯತೆ ನೀಡಿ, ನೆರೆಹೊರೆಯವರಲ್ಲಿಯೂ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಮಾದಕ ವಸ್ತುಗಳ ದುರ್ಬಳಕೆ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ದೊಡ್ಡ ಸಮಸ್ಯೆಯಾಗಿದೆ. ಇದರ ಹಿಂದೆ ದೊಡ್ಡ ಮಾಫಿಯಾ ಕಾರ್ಯನಿರ್ವಹಿಸುತ್ತಿದೆ. ಯುವಶಕ್ತಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಕುರಿತು ಆತ್ಮಾವಲೋಕನ ಅಗತ್ಯ. ವಿದ್ಯಾರ್ಥಿಗಳು ಯಾವುದೇ ಆಕರ್ಷಣೆ ಅಥವಾ ಒತ್ತಡಕ್ಕೆ ಒಳಗಾಗಿ ಮಾದಕ ವಸ್ತುಗಳ ದಾಸರಾಗಬಾರದು ಎಂದರು.
ಧಾರವಾಡದ ಡಿಮಾನ್ಸ್‌ನ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿ, ಮಾದಕ ವಸ್ತುಗಳ ದುರಭ್ಯಾಸವು ದಾರಿತಪ್ಪಿದ ವರ್ತನೆಯಾಗಿದೆ. ಅರೆಕ್ಷಣದ ಥ್ರಿಲ್ ಹಾಗೂ ಸಹವಾಸದೋಷದಿಂದ ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆಗೆ ಬಲಿಯಾದರೆ ಅನೇಕ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಆರೋಗ್ಯಪೂರ್ಣ ಜೀವನ ನಡೆಸಬೇಕು ಎಂದರು.
ಪ್ರಾಚಾರ್ಯ ಡಾ. ಪ್ರಕಾಶ ಜೋಗಿನ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮಾದಕ ವಸ್ತು ಸೇವನೆಯ ದುರಭ್ಯಾಸಕ್ಕೆ ಬಲಿಯಾಗದೆ ಆತ್ಮಸಾಕ್ಷಿಗನುಗುಣವಾಗಿ ಆರೋಗ್ಯಕರ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಪ್ರೊ. ಶಾಂಭವಿ ನರಗುಂದ ಪ್ರಾರ್ಥಿಸಿದರು. ಪ್ರೊ. ಮಲ್ಲಪ್ಪ ಭೈರಪ್ಪನವರ ಸ್ವಾಗತಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಗಂಗಾಧರ ಮರಳಿಹಳ್ಳಿ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರೊ. ಯಾಸ್ಮಿನ್ ಬೀಳಗಿ ವಂದಿಸಿದರು. ಪ್ರೊ. ಲಕ್ಷ್ಮೀ ಕುರಿ ನಿರೂಪಿಸಿದರು. ಡಾ. ಎಚ್.ವಿ. ಡಂಬಳ ಸೇರಿದಂತೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



