ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾಲಯವೆಂದರೆ ಕೇವಲ ಪಾಠ ಕಲಿಸುವ ಕೇಂದ್ರವಲ್ಲ; ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಪ್ರತಿಭಾ ಅನಾವರಣ ಹಾಗೂ ಭವಿಷ್ಯ ನಿರ್ಮಾಣಕ್ಕೆ ದಾರಿದೀಪವಾಗಿರುವ ಜ್ಞಾನದೇಗುಲ. ವಿದ್ಯಾರ್ಥಿಗಳು ಮತ್ತು ವಿದ್ಯಾಲಯದ ನಡುವಿನ ಆತ್ಮೀಯ ಹಾಗೂ ವಿಶ್ವಾಸಪೂರ್ಣ ಸಂಬಂಧವು ಶೈಕ್ಷಣಿಕ ಪ್ರಗತಿಯ ಜೊತೆಗೆ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರಾಂಶುಪಾಲ ಡಾ. ಅಪ್ಪಣ್ಣ ಹಂಜೆ ಹೇಳಿದರು.
ಹುಲಕೋಟಿಯ ಶ್ರೀ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026–27ನೇ ಸಾಲಿನಲ್ಲಿ ಪ್ರವೇಶ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ದಿಕ್ಸೂಚಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಅವರ ಪ್ರತಿಭೆ ಹಾಗೂ ಆಸಕ್ತಿಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವುದು ವಿದ್ಯಾಲಯದ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದ ಸಂಘಟಕ ಹಾಗೂ ಸಾಂಸ್ಕೃತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಲಯವನ್ನು ತಮ್ಮದೇ ಕುಟುಂಬವೆಂದು ಭಾವಿಸಿ ಶಿಸ್ತು, ಸಮಯಪಾಲನೆ, ಉತ್ತಮ ನಡತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕುಮಾರಿ ಪ್ರಜ್ಞಾ ವರ್ಣೇಕರ ಪ್ರಾರ್ಥಿಸಿದರು. ಕಲಾ ವಿಭಾಗದ ಮುಖ್ಯಸ್ಥೆ ಮಹಾನಂದ ಹಿರೇಮಠ ಸ್ವಾಗತಿಸಿದರು. ಐಕ್ಯುಎಸಿ ಸಹ ಸಂಯೋಜಕ ಡಾ. ಮಂಜುನಾಥ ತ್ಯಾಲಗಡಿ, ಉದ್ಯೋಗ ಮಾಹಿತಿ ಕೋಶದ ಸಂಯೋಜಕ ಡಾ. ಶ್ರೀಶವಿಠ್ಠಲ ಡಿ., ಎನ್ಎಸ್ಎಸ್ ಘಟಕದ ಸಂಯೋಜಕ ವಿಜಯಕುಮಾರ ಎಸ್., ಹೊಸ ದಿಗಂತ ಕಾರ್ಯಕ್ರಮದ ಸಂಯೋಜಕ ಹುಸೇನಭಾಷಾ, ಶಿಸ್ತು ಸಮಿತಿ ಸಂಯೋಜಕ ಮಹಾಂತೇಶ ಹಾಗೂ ರೆಡ್ಕ್ರಾಸ್ ಸಂಯೋಜಕ ಭೀಮೇಶ ಕಾಲೇಜಿನ ವಿವಿಧ ಶೈಕ್ಷಣಿಕ ಹಾಗೂ ಸಹಪಠ್ಯ ಘಟಕಗಳ ಕುರಿತು ಪರಿಚಯಿಸಿದರು.
ಆಂತರಿಕ ಪರೀಕ್ಷಾ ವಿಭಾಗದ ಸಂಯೋಜಕ ಮನೋಜಕುಮಾರ ಜೋತಾವರ ವಂದಿಸಿದರು. ರೋವರ್ಸ್–ರೇಂಜರ್ಸ್ ಸಂಯೋಜಕಿ ಸಾವಿತ್ರಿ ಟಿ. ಕಾರ್ಯಕ್ರಮ ನಿರ್ವಹಿಸಿದರು.



