ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲ್ಲೂಕಿನ ಗೊಜನೂರು ಗ್ರಾಮದಲ್ಲಿ ಸುಮಾರು ೨೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಿಸಿ ರಸ್ತೆ ಕಾಮಗಾರಿಗೆ ಶನಿವಾರ ಶಾಸಕ ಡಾ. ಚಂದ್ರು ಲಮಾಣಿ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಕುಡಿಯುವ ನೀರು ಹಾಗೂ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದರು.
ತಾಲ್ಲೂಕಿನ ಹಲವು ರಸ್ತೆಗಳು ಬಹುತೇಕ ಹದಗೆಟ್ಟಿದ್ದು, ಅವುಗಳ ಪುನರ್ನಿರ್ಮಾಣಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳಿಗೂ ವಿಶೇಷ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಹಂತ ಹಂತವಾಗಿ ಹದಗೆಟ್ಟ ರಸ್ತೆಗಳನ್ನು ಪುನರ್ನಿರ್ಮಿಸಲಾಗುವುದು ಎಂದು ಹೇಳಿದರು.
ರಸ್ತೆ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು. ಕಾಮಗಾರಿಗೆ ಸ್ಥಳೀಯರು ಸಹಕಾರ ನೀಡುವ ಮೂಲಕ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಮೇಶ ದನದಮನಿ, ತಿಮ್ಮರೆಡ್ಡಿ ಮರಡ್ಡಿ, ಕುಮಾರಸ್ವಾಮಿ ಹಿರೇಮಠ, ಗಂಗಾಧರ ಮೆಣಸಿನಕಾಯಿ, ನಿಂಗನಗೌಡ ಪಾಟೀಲ, ನಿಂಗನಗೌಡ ಕಣವಿ, ಪ್ರವೀಣ ಮಾಡಳ್ಳಿ, ಶೇಕಣ್ಣ ಸೊರಟೂರ, ವೀರಭದ್ರಪ್ಪ ವಡಕಣ್ಣವರ, ಬಸವರಾಜ ಚಕ್ರಸಾಲಿ, ಎಸ್.ಡಿ. ಪಾಟೀಲ, ಎಂ.ಎಫ್. ಪಾಟೀಲ, ಫಕ್ಕೀರೇಶ ದನದಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



