ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ಹೃದಯ ಭಾಗದಲ್ಲಿರುವ ಸುಮಾರು ೩೫ ಎಕರೆ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗದಗ-ಬೆಟಗೇರಿ ಬ್ಯುಸಿನೆಸ್ ಸೆಂಟರ್ ಯೋಜನೆಯ ಕಾಮಗಾರಿಗಳು ಅತ್ಯುತ್ತಮ ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಯೋಜನೆಯ ಪ್ರತಿಯೊಂದು ಕಾಮಗಾರಿಯೂ ಜನರಿಗೆ ದೀರ್ಘಕಾಲ ಉಪಯೋಗವಾಗುವಂತಿರಬೇಕು ಎಂದು ಶಾಸಕ ಡಾ. ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರದ ಆಶ್ರಯದಲ್ಲಿ ಶನಿವಾರ ಜಿಲ್ಲಾಡಳಿತ ಭವನದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ದ್ವಿತೀಯ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಬ್ಯುಸಿನೆಸ್ ಸೆಂಟರ್ ಕುರಿತು ಬಿಡ್‌ದಾರರು, ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ಹೂಡಿಕೆದಾರರೊಂದಿಗೆ ಸಮಗ್ರ ಚರ್ಚೆ ನಡೆಸಿದರು.
ಯೋಜನೆಗೆ ರೂಪಿಸಿರುವ ವಿನ್ಯಾಸದಂತೆ ಅತ್ಯಾಕರ್ಷಕ ಹಾಗೂ ಜನೋಪಯೋಗಿ ಕಟ್ಟಡ ನಿರ್ಮಾಣವಾಗಬೇಕು. ಸಾರ್ವಜನಿಕರಿಗೆ ದೀರ್ಘಕಾಲಿಕವಾಗಿ ಸದ್ಬಳಕೆಯಾಗುವ ರೀತಿಯಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಬೇಕು ಎಂದರು.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಯೋಜನೆ ಅನುಷ್ಠಾನಗೊಳ್ಳುತ್ತಿರುವುದರಿಂದ ಬಿಡ್‌ದಾರರು ಕೇವಲ ಲಾಭದ ದೃಷ್ಟಿಯಿಂದ ಮಾತ್ರ ಯೋಜನೆಯಲ್ಲಿ ಭಾಗವಹಿಸದೆ ಸೇವಾ ಮನೋಭಾವದಿಂದ ಪಾಲ್ಗೊಳ್ಳಬೇಕು. ಸರ್ಕಾರ, ಸಾರ್ವಜನಿಕರು ಹಾಗೂ ಖಾಸಗಿ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ರೂಪುಗೊಳ್ಳುತ್ತಿರುವ ಈ ಯೋಜನೆಯ ಮೂಲ ಉದ್ದೇಶ ಜನಸಾಮಾನ್ಯರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುವುದಾಗಿದೆ ಎಂದು ಹೇಳಿದರು.
ಯೋಜನೆ ಕುರಿತು ಈಗಾಗಲೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರವು ಸರ್ಕಾರದ ಅಧಿಕೃತ ಸಂಸ್ಥೆಯಾಗಿದ್ದು, ನಗರದ ಹೃದಯ ಭಾಗದಲ್ಲಿರುವ ಸುಮಾರು ೩೫ ಎಕರೆ ಭೂಮಿಯನ್ನು ಪ್ರಾಧಿಕಾರದ ಹೆಸರಿಗೆ ವರ್ಗಾಯಿಸಲಾಗಿದೆ. ಈ ಪ್ರದೇಶದಲ್ಲಿ ಅತ್ಯುತ್ತಮ ವಾಣಿಜ್ಯ ಕೇಂದ್ರ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ಡಾ. ಎಚ್.ಕೆ. ಪಾಟೀಲ ವಿವರಿಸಿದರು.
ಹೂಡಿಕೆದಾರರು ಹಾಗೂ ಖಾಸಗಿ ಸಂಸ್ಥೆಗಳನ್ನು ಆಕರ್ಷಿಸುವ ಉದ್ದೇಶದಿಂದ Expression of Interest (EOI) ಆಹ್ವಾನಿಸಲಾಗಿದೆ. ವಾಣಿಜ್ಯ ಚಟುವಟಿಕೆಗಳಿಗೆ ಅತ್ಯಂತ ಸೂಕ್ತ ಸ್ಥಳವಾಗಿರುವ ಈ ಪ್ರದೇಶವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಐತಿಹಾಸಿಕ ಗದಗಕ್ಕೆ ಹೊಸ ವಾಣಿಜ್ಯ ಗುರುತು
ಗದಗವು ಐತಿಹಾಸಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ತನ್ನದೇ ಆದ ಮಹತ್ವ ಹೊಂದಿರುವ ನಗರವಾಗಿದೆ. ಹಿಂದಿನಿಂದಲೂ ಹತ್ತಿ ವಹಿವಾಟು ಸೇರಿದಂತೆ ವಿವಿಧ ವ್ಯಾಪಾರ ಚಟುವಟಿಕೆಗಳಿಗೆ ಗದಗ ಪ್ರಮುಖ ಕೇಂದ್ರವಾಗಿತ್ತು. ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಯಲ್ಲಿಯೂ ಗದಗ ಪ್ರಮುಖ ಪಾತ್ರ ವಹಿಸಿದೆ.
ಲಕ್ಕುಂಡಿ ಸೇರಿದಂತೆ ಹಲವು ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳನ್ನು ಹೊಂದಿರುವ ಗದಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ವಿಪುಲ ಅವಕಾಶಗಳಿವೆ. ಈ ಅವಕಾಶಗಳನ್ನು ಹೂಡಿಕೆದಾರರು ಹಾಗೂ ಸ್ಥಳೀಯ ಉದ್ಯಮಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಏಳು ಸೆಕ್ಟರ್‌ಗಳಲ್ಲಿ ಹಂತಹಂತವಾಗಿ ಅಭಿವೃದ್ಧಿ
ಬ್ಯುಸಿನೆಸ್ ಸೆಂಟರ್ ಯೋಜನೆಯನ್ನು ಒಟ್ಟು ಏಳು ಸೆಕ್ಟರ್‌ಗಳಾಗಿ ವಿಂಗಡಿಸಿ ಹಂತಹಂತವಾಗಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ. ಯೋಜನೆಯಡಿ ಪಂಚತಾರಾ ಹೋಟೆಲ್, ಆಧುನಿಕ ವಾಣಿಜ್ಯ ಮಳಿಗೆಗಳು, ಸಭಾಂಗಣ, ಟೆಕ್ಸ್‌ಟೈಲ್ ಕೇಂದ್ರ, ಮಕ್ಕಳ ಮನರಂಜನಾ ಪ್ರದೇಶ, ಗಾಂಧಿ ಭವನ, ಆಕರ್ಷಕ ವೃತ್ತಗಳು, ಅಗಲವಾದ ರಸ್ತೆಗಳು ಹಾಗೂ ವ್ಯವಸ್ಥಿತ ಸಾರಿಗೆ ಸಂಪರ್ಕ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ.
ನಗರದ ಜನರಿಗೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವ ವ್ಯಾಪಾರಸ್ಥರು, ಹೂಡಿಕೆದಾರರು ಮತ್ತು ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಆಶಯ ಹೊಂದಲಾಗಿದೆ.
ವಿವಿಧ ಕ್ಷೇತ್ರಗಳ ವ್ಯಾಪಾರಸ್ಥರಿಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಸಲಹೆ ನೀಡಲು ಅವಕಾಶ ಕಲ್ಪಿಸಲಾಗಿದೆ. ವಿಶೇಷವಾಗಿ ಬಂಗಾರ ವ್ಯಾಪಾರಸ್ಥರು ಸೇರಿದಂತೆ ವಿವಿಧ ವ್ಯಾಪಾರ ವಲಯಗಳ ಪ್ರತಿನಿಧಿಗಳು ತಮ್ಮ ಅಗತ್ಯತೆಗಳನ್ನು ಲಿಖಿತವಾಗಿ ಸಲ್ಲಿಸಿದರೆ, ಅವುಗಳನ್ನು ಯೋಜನೆಯಲ್ಲಿ ಅಳವಡಿಸುವ ಸಾಧ್ಯತೆಗಳ ಕುರಿತು ಪರಿಶೀಲಿಸಲಾಗುವುದು ಎಂದರು.
ಹೂಡಿಕೆದಾರರು ಹಾಗೂ ವ್ಯಾಪಾರಸ್ಥರು ಸೆಪ್ಟೆಂಬರ್ ೧೦ರೊಳಗಾಗಿ ತಮ್ಮ ಅಗತ್ಯತೆಗಳು ಮತ್ತು ಸಲಹೆಗಳನ್ನು ಲಿಖಿತವಾಗಿ ಸಲ್ಲಿಸುವ ಮೂಲಕ ಯೋಜನೆಯ ಅನುಷ್ಠಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಡಾ. ಎಚ್.ಕೆ. ಪಾಟೀಲ ಮನವಿ ಮಾಡಿದರು.
ಗುಣಮಟ್ಟಕ್ಕೆ ಯಾವುದೇ ರಾಜಿ ಇಲ್ಲ: ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಯೋಜನೆಯ ಅನುಷ್ಠಾನದಲ್ಲಿ ಕಾನೂನು ಪಾಲನೆ ಹಾಗೂ ಗುಣಮಟ್ಟಕ್ಕೆ ಯಾವುದೇ ರಾಜಿ ಮಾಡಿಕೊಳ್ಳಲು ಅವಕಾಶವಿಲ್ಲ. ಯೋಜನೆ ಅಂತಿಮವಾಗಿ ರೂಪುಗೊಳ್ಳುವಾಗ ಈಗಾಗಲೇ ನಿರ್ಧರಿಸಿರುವ ಉದ್ದೇಶ ಹಾಗೂ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದರು.
ಸ್ಥಳೀಯ ವ್ಯಾಪಾರಸ್ಥರು ಹಾಗೂ ಹೂಡಿಕೆದಾರರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಯೋಜನೆಯಲ್ಲಿ ಪಾಲ್ಗೊಳ್ಳಬೇಕು. ಸ್ಥಳೀಯ ಉದ್ಯಮಿಗಳು ಅವಕಾಶವನ್ನು ಕೈಬಿಟ್ಟರೆ ಹೊರಗಿನಿಂದ ದೊಡ್ಡ ಪ್ರಮಾಣದ ಹೂಡಿಕೆದಾರರು ಬಂದು ಇಲ್ಲಿ ವ್ಯಾಪಾರ ಚಟುವಟಿಕೆ ನಡೆಸುವ ಸಾಧ್ಯತೆಯಿದೆ. ಈಗಾಗಲೇ ಕೆಲವು ವ್ಯಾಪಾರ ಚಟುವಟಿಕೆಗಳಲ್ಲಿ ಇಂತಹ ಅನುಭವವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯರು ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಗದಗ ನಗರದ ಭವಿಷ್ಯದ ವಾಣಿಜ್ಯ ಬೆಳವಣಿಗೆಗೆ ಈ ಯೋಜನೆ ಮಹತ್ವದ ಹೆಜ್ಜೆಯಾಗಲಿದ್ದು, ಯೋಜನೆ ಪೂರ್ಣಗೊಂಡ ನಂತರ ವ್ಯಾಪಾರ, ಉದ್ಯೋಗ, ಹೂಡಿಕೆ, ಪ್ರವಾಸೋದ್ಯಮ ಹಾಗೂ ನಗರ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯುವ ನಿರೀಕ್ಷೆಯಿದೆ ಎಂದರು.
ಸಭೆಯಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಡಾ. ಎನ್.ಎಚ್. ನಾಗನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಸಹಾಯಕ ಆಯುಕ್ತ ಗಂಗಪ್ಪ ಎಂ., ಬಸನಗೌಡ ಕೊಟೂರ, ರಾಜಾರಾಮ ಪವಾರ್, ಕೊಟ್ರೇಶ್ ವಿಭೂತಿ, ವಸಂತ ಮಡ್ಲೂರ, ಜಿ.ಜೆ. ರುದ್ರಣ್ಣಗೌಡ, ನಿಜಾಮುದ್ದೀನ್, ಜಂಟಿ ನಿರ್ದೇಶಕ (ಕೈಗಾರಿಕೆ) ಪ್ರಕಾಶ್, ಗೋಪಾಲ್ ಅಗರವಾಲ್, ಆಕಾಶ್ ಅಗರವಾಲ್, ನವೀನ್ ಸೇರಿದಂತೆ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು, ವ್ಯಾಪಾರಸ್ಥರು, ಸಣ್ಣ ಕಟ್ಟಡ ಹಾಗೂ ಬಡಾವಣೆ ನಿರ್ಮಾಣದಾರರು, ಹೂಡಿಕೆದಾರರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಗದಗ ನಗರದ ಹೃದಯ ಭಾಗದಲ್ಲಿರುವ ೩೫ ಎಕರೆ ಪ್ರದೇಶವನ್ನು ಕೇವಲ ವಾಣಿಜ್ಯ ಚಟುವಟಿಕೆಗಳಿಗೆ ಸೀಮಿತಗೊಳಿಸದೆ, ನಗರದ ಭವಿಷ್ಯದ ಬೆಳವಣಿಗೆಗೆ ಪೂರಕವಾಗುವ ಸಮಗ್ರ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಆಶಯವಿದೆ. ಸ್ಥಳೀಯ ವ್ಯಾಪಾರಸ್ಥರು ಹಾಗೂ ಹೂಡಿಕೆದಾರರು ತಮ್ಮ ಅಗತ್ಯತೆ ಮತ್ತು ಸಲಹೆಗಳನ್ನು ನೀಡುವ ಮೂಲಕ ಈ ಮಹತ್ವದ ಯೋಜನೆಯ ಭಾಗವಾಗಬೇಕು.
— ಡಾ. ಎಚ್.ಕೆ. ಪಾಟೀಲ, ಶಾಸಕ
ಕೆಪಿಎಂಸಿಯಿಂದ ಯೋಜನೆ ಪ್ರಸ್ತುತಿ
ಸಭೆಯಲ್ಲಿ ಕೆಪಿಎಂಸಿ ಸಂಸ್ಥೆಯ ಪ್ರತಿನಿಧಿಗಳು ಬ್ಯುಸಿನೆಸ್ ಸೆಂಟರ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ಯೋಜನೆಯ ಸಮಗ್ರ ರೂಪುರೇಷೆ, ಕಟ್ಟಡ ವಿನ್ಯಾಸ, ಮೂಲಸೌಕರ್ಯ, ವಿವಿಧ ಸೆಕ್ಟರ್‌ಗಳ ಅಭಿವೃದ್ಧಿ ಹಾಗೂ ಹಂತಹಂತವಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.



