ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿರುವ ಗದಗ ಮೀಡಿಯಾ ಕ್ರಿಕೆಟ್ ಲೀಗ್ ಅಂತಿಮ ಘಟ್ಟ ತಲುಪಿದ್ದು, ಆ. 23ರಂದು ನಡೆಯುವ ಫೈನಲ್ ಪಂದ್ಯದಲ್ಲಿ ನೈಟ್ ರೈಡರ್ಸ್ ಹಾಗೂ ರೂರಲ್ ಕಿಂಗ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಲೀಗ್ ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ದಾಖಲಿಸಿ ಅಗ್ರಸ್ಥಾನ ಪಡೆದ ನೈಟ್ ರೈಡರ್ಸ್ ತಂಡ ಫೈನಲ್ಗೆ ಲಗ್ಗೆ ಇಟ್ಟಿದೆ. ಮತ್ತೊಂದೆಡೆ, ನೈಟ್ ರೈಡರ್ಸ್ ವಿರುದ್ಧ ಸೋತರೂ ವಿನ್ನರ್ಸ್ ಹಾಗೂ ಆರ್ಸಿಬಿ ತಂಡಗಳನ್ನು ಮಣಿಸಿದ ರೂರಲ್ ಕಿಂಗ್ಸ್ ನಿರ್ಣಾಯಕ ಹಂತದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಇನ್ನು ಲೀಗ್ ಹಂತದ ಮೂರು ಪಂದ್ಯಗಳಲ್ಲೂ ಸೋಲು ಕಂಡ ಆರ್ಸಿಬಿ ಹಾಗೂ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ ವಿನ್ನರ್ಸ್ ತಂಡಗಳು ಪ್ರಶಸ್ತಿ ರೇಸ್ನಿಂದ ಹೊರಬಿದ್ದಿವೆ. ಹೀಗಾಗಿ ಚೊಚ್ಚಲ ಚಾಂಪಿಯನ್ ಪಟ್ಟಕ್ಕಾಗಿ ನೈಟ್ ರೈಡರ್ಸ್ ಹಾಗೂ ರೂರಲ್ ಕಿಂಗ್ಸ್ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
ಆರ್ಸಿಬಿ ವಿರುದ್ಧ ನೈಟ್ ರೈಡರ್ಸ್ಗೆ 27 ರನ್ಗಳ ಭರ್ಜರಿ ಗೆಲುವು
ಶನಿವಾರ ನಡೆದ ಲೀಗ್ ಹಂತದ ಆರನೇ ಪಂದ್ಯದಲ್ಲಿ ನೈಟ್ ರೈಡರ್ಸ್ ತಂಡವು ಆರ್ಸಿಬಿ ವಿರುದ್ಧ 27 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೈಟ್ ರೈಡರ್ಸ್ ನಿಗದಿತ 10 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತು. ಪ್ರಭುಸ್ವಾಮಿ ಅರವಟಗಿಮಠ 30 ಎಸೆತಗಳಲ್ಲಿ 39 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಮಂಜು ಪತ್ತಾರ 18 ಎಸೆತಗಳಲ್ಲಿ 35 ರನ್ ಗಳಿಸಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಆರ್ಸಿಬಿ ಪರ ಮಂಜು ಸಾಳೇರ ಹಾಗೂ ಗೌರೀಶ ತಲಾ ಒಂದು ವಿಕೆಟ್ ಪಡೆದರು.
99 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ ತಂಡವು ನಿಗದಿತ 10 ಓವರ್ಗಳಲ್ಲಿ 71 ರನ್ ಗಳಿಸಲಷ್ಟೇ ಶಕ್ತವಾಯಿತು. ವಿನಾಯ ಚೌಡಾಪೂರ 34 ಎಸೆತಗಳಲ್ಲಿ 43 ರನ್ ಗಳಿಸಿದರೆ, ಅಜಿತ ಹೊಂಬಾಳಿ 11 ರನ್ ಗಳಿಸಿದರು. ನೈಟ್ ರೈಡರ್ಸ್ ಪರ ಪ್ರಭುಸ್ವಾಮಿ ಅರವಟಗಿಮಠ ಹಾಗೂ ಸಂಗನಗೌಡ ಖಾನಪ್ಪಗೌಡ್ರ ತಲಾ ಒಂದು ವಿಕೆಟ್ ಪಡೆದರು.
ಆಲ್ರೌಂಡ್ ಪ್ರದರ್ಶನ ನೀಡಿದ ಪ್ರಭುಸ್ವಾಮಿ ಅರವಟಗಿಮಠ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ವಿನ್ನರ್ಸ್ ಮಣಿಸಿ ಫೈನಲ್ಗೇರಿದ ರೂರಲ್ ಕಿಂಗ್ಸ್
ಶನಿವಾರ ನಡೆದ ಐದನೇ ಪಂದ್ಯದಲ್ಲಿ ರೂರಲ್ ಕಿಂಗ್ಸ್ ತಂಡವು ವಿನ್ನರ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಫೈನಲ್ಗೆ ಅರ್ಹತೆ ಪಡೆಯಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ರೂರಲ್ ಕಿಂಗ್ಸ್, ವಿನ್ನರ್ಸ್ ತಂಡವನ್ನು 79 ರನ್ಗಳಿಗೆ ಕಟ್ಟಿಹಾಕಿತು. ಅಶೋಕ ಹೂಗಾರ 25, ಈಶ್ವರ ತಿಪ್ಪರಡ್ಡಿ 20 ಹಾಗೂ ಪರಮೇಶ ಲಮಾಣಿ 19 ರನ್ ಗಳಿಸಿದರು. ರೂರಲ್ ಕಿಂಗ್ಸ್ ಪರ ಶಿವಾನಂದ ಹಿರೇಮಠ, ಸಂಜೀವ ಪಾಂಡ್ರೆ, ಪ್ರಕಾಶ ಗುದ್ದಿನ, ನಿಂಗನಗೌಡ ಹನಮಗೌಡ್ರ ಹಾಗೂ ಸೂರಜ್ ಮಯೇಕರ ತಲಾ ಒಂದು ವಿಕೆಟ್ ಪಡೆದರು.
80 ರನ್ಗಳ ಗುರಿ ಬೆನ್ನತ್ತಿದ ರೂರಲ್ ಕಿಂಗ್ಸ್ ಕೇವಲ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ನಾಯಕ ನಿಂಗನಗೌಡ 27 ಎಸೆತಗಳಲ್ಲಿ 33 ರನ್ ಗಳಿಸಿದರೆ, ಸಂಜೀವ ಪಾಂಡ್ರೆ 26 ಎಸೆತಗಳಲ್ಲಿ 34 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿನ್ನರ್ಸ್ ತಂಡದ ಪರಮೇಶ ಲಮಾಣಿ 2 ವಿಕೆಟ್ ಪಡೆದರು.
ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಿಂಗನಗೌಡ ಹನಮಗೌಡ್ರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಪಂದ್ಯಶ್ರೇಷ್ಠ ಪ್ರಶಸ್ತಿ ವಿಜೇತರಿಗೆ ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಎಂ. ಹೆಬ್ಬಳ್ಳಿ ಟ್ರೋಫಿ ವಿತರಿಸಿದರು.
ಈ ಸಂದರ್ಭದಲ್ಲಿ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ, ಕಾನಿಪ ಮಾಜಿ ಅಧ್ಯಕ್ಷರಾದ ಅನಂತ ಕಾರ್ಕಳ, ಎಚ್.ಎಂ. ಶರೀಫನವರ, ವಿವಿಧ ತಂಡಗಳ ಮಾಲೀಕರಾದ ಸುನೀಲ ತೆಂಬದಮನಿ, ಟಿ.ಎನ್. ಭಾಂಡಗೆ, ಜಗದೀಶ ಪೂಜಾರ, ಅಜಿತ ಹೊಂಬಾಳಿ, ಆನಂದ ಸಾಲಿಗ್ರಾಮ, ಆನಂದಯ್ಯ ವಿರಕ್ತಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.



