ನವದೆಹಲಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ನಿರ್ದೇಶನದಂತೆ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು.
ನ್ಯಾಯಮೂರ್ತಿ ವಿಕ್ರಮ್ ನಾಥ್ ಹಾಗೂ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳು ಅಗತ್ಯ ಅಂಕಿಅಂಶಗಳೊಂದಿಗೆ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಲಾಗಿದೆ. ಅಲ್ಲಿಯವರೆಗೆ ಈ ಹಿಂದೆ ನೀಡಿರುವ ಆದೇಶದಂತೆ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸುವ ವ್ಯವಸ್ಥೆಯನ್ನು ಕರ್ನಾಟಕ ಮುಂದುವರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ವಿಚಾರಣೆ ವೇಳೆ ತಮಿಳುನಾಡು ಪರ ಹಿರಿಯ ವಕೀಲ ಸಿಎಸ್ ವೈದ್ಯನಾಥನ್ ವಾದ ಮಂಡಿಸಿದರು. ರಾಜ್ಯಕ್ಕೆ ಬರಬೇಕಾದ ಪ್ರಮಾಣದ ಕಾವೇರಿ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಅಲ್ಲದೆ, ಕಾವೇರಿ ನದಿಯ ಒಳಹರಿವು, ನೀರಿನ ಬಳಕೆ, ರಾಜ್ಯದಿಂದ ನೀರು ಬಿಡುಗಡೆ, ಜಲಾಶಯಗಳಲ್ಲಿನ ನೀರಿನ ಸಂಗ್ರಹ ಹಾಗೂ ಅನುಮತಿಸಲಾದ ನೀರಿನ ಬಳಕೆಯನ್ನು ನಿರ್ಧರಿಸುವ ವಿಚಾರದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧಿಕಾರ, ಕಾರ್ಯ ಮತ್ತು ಕರ್ತವ್ಯಗಳ ಕುರಿತು ಸುಪ್ರೀಂಕೋರ್ಟ್ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಕರ್ನಾಟಕದಿಂದ ತಮಿಳುನಾಡಿಗೆ ಬಿಡುಗಡೆಯಾದ ನೀರಿನ ಪ್ರಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಟ್ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ ಈ ಚಾರ್ಟ್‌ನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್, CWMA ನೀಡಿರುವ ನಿರ್ದೇಶನದಂತೆ ಕರ್ನಾಟಕ ಈಗಾಗಲೇ ನೀರು ಒದಗಿಸಿರುವುದನ್ನು ಚಾರ್ಟ್ ತೋರಿಸುತ್ತಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಪರ ವಕೀಲ ಸಿಎಸ್ ವೈದ್ಯನಾಥನ್, ಸೋಮವಾರ ಬೆಳಗಿನ ವೇಳೆಗೆ CWMA ನಿರ್ದೇಶಿಸಿದ್ದ ಪ್ರಮಾಣದ ನೀರು ತಮಿಳುನಾಡಿಗೆ ತಲುಪಿದೆ ಎಂದು ತಿಳಿಸಿದರು.
ಆದರೆ, ಹಿಂದಿನ ದಿನದ ಲೆಕ್ಕಾಚಾರದಲ್ಲಿ ನೀರಿನ ಕೊರತೆ ಉಂಟಾಗಿತ್ತು. ತಮಿಳುನಾಡಿಗೆ ನಿಗದಿತ ಪ್ರಮಾಣದಲ್ಲಿ ನೀರು ತಲುಪುವಂತೆ ಆ ಕೊರತೆಯನ್ನು ಕರ್ನಾಟಕದಿಂದ ಸರಿದೂಗಿಸುವಂತೆ CWMA ಸೂಚನೆ ನೀಡುತ್ತಿಲ್ಲ ಎಂದು ಅವರು ವಾದಿಸಿದರು.
ಮುಂದಿನ ವಿಚಾರಣೆಯಲ್ಲಿ ಉಭಯ ರಾಜ್ಯಗಳು ನೀರಿನ ಒಳಹರಿವು, ಬಳಕೆ, ಜಲಾಶಯಗಳ ಸಂಗ್ರಹ ಹಾಗೂ ನೀರು ಬಿಡುಗಡೆಗೆ ಸಂಬಂಧಿಸಿದ ಸಂಪೂರ್ಣ ಅಂಕಿಅಂಶಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸುವ ಸಾಧ್ಯತೆಯಿದೆ.



