HomeKarnataka Newsಮೊದಲ ಪತ್ನಿ ಜೀವಂತವಾಗಿರುವಾಗಲೇ ಎರಡನೇ ಮದುವೆಗೆ ಕುಮ್ಮಕ್ಕು ನೀಡಿದರೆ ಕೇಸ್: ಹೈಕೋರ್ಟ್

ಮೊದಲ ಪತ್ನಿ ಜೀವಂತವಾಗಿರುವಾಗಲೇ ಎರಡನೇ ಮದುವೆಗೆ ಕುಮ್ಮಕ್ಕು ನೀಡಿದರೆ ಕೇಸ್: ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೇ, ಆಕೆ ಜೀವಂತವಾಗಿರುವ ಸಂದರ್ಭದಲ್ಲಿ ಮತ್ತೊಂದು ಮದುವೆಯಾಗುವ ಪ್ರಕರಣಗಳಲ್ಲಿ, ಎರಡನೇ ಮದುವೆಗೆ ಕುಮ್ಮಕ್ಕು ನೀಡುವ, ಪ್ರಚೋದಿಸುವ ಅಥವಾ ನೇರವಾಗಿ ಸಹಾಯ ಮಾಡುವ ಸಂಬಂಧಿಕರು ಹಾಗೂ ಇತರ ವ್ಯಕ್ತಿಗಳ ವಿರುದ್ಧವೂ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 109ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಯಾವುದೇ ಅಡ್ಡಿಯಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಎರಡನೇ ಮದುವೆಯಾಗಿರುವ ಆರೋಪ ಎದುರಿಸುತ್ತಿರುವ ಸುನೀಲ್ ಕುಮಾರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ಕಲಬುರಗಿ ಪೀಠ ಈ ಮಹತ್ವದ ಆದೇಶ ನೀಡಿದೆ.

ಐಪಿಸಿ ಸೆಕ್ಷನ್ 494ರ ಅಡಿಯಲ್ಲಿ ಮೊದಲ ಪತ್ನಿ ಜೀವಂತವಾಗಿರುವಾಗ ಎರಡನೇ ವಿವಾಹವಾಗುವ ವ್ಯಕ್ತಿಯ ವಿರುದ್ಧ ದ್ವಿಪತ್ನಿತ್ವದ ಆರೋಪ ಅನ್ವಯಿಸುತ್ತದೆ. ಆದರೆ, ಈ ಕೃತ್ಯಕ್ಕೆ ಕುಮ್ಮಕ್ಕು ನೀಡುವ ಅಥವಾ ಸಹಕರಿಸುವ ಇತರರಿಗೆ ಶಿಕ್ಷೆಯಿಂದ ಯಾವುದೇ ವಿಶೇಷ ವಿನಾಯಿತಿ ನೀಡಲಾಗಿಲ್ಲ ಎಂದು ಪೀಠ ತಿಳಿಸಿದೆ.

ಮೊದಲ ಮದುವೆ ಕಾನೂನುಬದ್ಧವಾಗಿ ಜಾರಿಯಲ್ಲಿದೆ ಎಂಬ ವಿಚಾರ ತಿಳಿದಿದ್ದರೂ, ಎರಡನೇ ಮದುವೆಗೆ ಅಗತ್ಯ ವ್ಯವಸ್ಥೆ ಮಾಡುವುದು, ಪ್ರಚೋದನೆ ನೀಡುವುದು ಅಥವಾ ವಿವಾಹ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಿ ಸಹಾಯ ಮಾಡುವುದು ನಡೆದಿದ್ದರೆ, ಅಂತಹ ವ್ಯಕ್ತಿಗಳ ವಿರುದ್ಧವೂ ಐಪಿಸಿ ಸೆಕ್ಷನ್ 109ರ ಅಡಿಯಲ್ಲಿ ಪ್ರಚೋದನೆ ಆರೋಪ ಅನ್ವಯಿಸುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಈ ಸಂಬಂಧ ಸುಪ್ರೀಂಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳ ಹಿಂದಿನ ತೀರ್ಪುಗಳನ್ನು ಪರಿಗಣಿಸಿದ ನ್ಯಾಯಪೀಠ, ಎರಡನೇ ಮದುವೆಗೆ ಸಹಕರಿಸಿದವರ ವಿರುದ್ಧ ದಾಖಲಿಸಿರುವ ಐಪಿಸಿ ಸೆಕ್ಷನ್ 109ರ ಅಡಿಯಲ್ಲಿ ಪ್ರಚೋದನೆ ಆರೋಪವನ್ನು ಕೇವಲ ಈ ಕಾರಣಕ್ಕಾಗಿ ಕೈಬಿಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಪ್ರಕರಣದ ಹಿನ್ನೆಲೆ

ಪ್ರಕರಣದ ಅರ್ಜಿದಾರ ಸುನೀಲ್ ಕುಮಾರ್ ಅವರು ಮೊದಲ ಪತ್ನಿ ಜೀವಂತವಾಗಿದ್ದರೂ ಮತ್ತೊಬ್ಬ ಮಹಿಳೆಯನ್ನು ಎರಡನೇ ವಿವಾಹವಾಗಿದ್ದರು ಎಂಬ ಆರೋಪ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮೊದಲ ಪತ್ನಿ ವಿಚಾರಣಾ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿ, ಪ್ರಕರಣದ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು ಐಪಿಸಿ ಸೆಕ್ಷನ್ 494, ಸೆಕ್ಷನ್ 109 ಹಾಗೂ ಸೆಕ್ಷನ್ 149ರ ಅಡಿಯಲ್ಲಿ ಕಾಗ್ನಿಜೆನ್ಸ್ ಪಡೆದುಕೊಂಡಿತ್ತು. ಬಳಿಕ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಸಿಂದಗಿ ಪೊಲೀಸ್ ಠಾಣೆಗೆ ನಿರ್ದೇಶನ ನೀಡಿತ್ತು.

ಈ ಪ್ರಕರಣದಲ್ಲಿ ಎರಡನೇ ಮದುವೆಯಾಗಿದ್ದ ಪತಿ, ಎರಡನೇ ಪತ್ನಿ ಹಾಗೂ ವಿವಾಹ ನೆರವೇರಿಸಿದ ಅರ್ಚಕರು ಸೇರಿದಂತೆ ಇತರರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠದ ಮುಂದೆ, ಐಪಿಸಿ ಸೆಕ್ಷನ್ 494ರ ಅಡಿಯಲ್ಲಿ ನಡೆಯುವ ಅಪರಾಧಕ್ಕೆ ಸೆಕ್ಷನ್ 109ರ ಪ್ರಕಾರ ಇತರ ವ್ಯಕ್ತಿಗಳ ವಿರುದ್ಧವೂ ಕುಮ್ಮಕ್ಕು ನೀಡಿದ ಆರೋಪ ಅನ್ವಯಿಸಬಹುದೇ ಎಂಬ ಕಾನೂನು ಪ್ರಶ್ನೆ ಎದುರಾಗಿತ್ತು.

ಈ ಪ್ರಮುಖ ಕಾನೂನು ಪ್ರಶ್ನೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಸ್ತೃತ ಪೀಠದ ಪರಿಗಣನೆಗೆ ಕಳುಹಿಸುವಂತೆ ಏಕಸದಸ್ಯ ಪೀಠವು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ರವಾನಿಸಿತ್ತು. ಬಳಿಕ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣವನ್ನು ದ್ವಿಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ದ್ವಿಸದಸ್ಯ ಪೀಠ ಇದೀಗ ಎರಡನೇ ಮದುವೆಗೆ ಸಹಕರಿಸಿದವರ ವಿರುದ್ಧವೂ ಐಪಿಸಿ ಸೆಕ್ಷನ್ 109ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img