ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೊದಲ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದು, 1,07,96,339 ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಅನ್ಬುಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ಐಆರ್ ಪ್ರಕ್ರಿಯೆಗೆ 15,17,042 ಮಂದಿ ಗೈರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
65,45,679 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದು, 16,39,864 ಮಂದಿ ಮೃತಪಟ್ಟಿದ್ದಾರೆ. 7,09,870 ಮತದಾರರು ಒಂದಕ್ಕಿಂತ ಹೆಚ್ಚು ಕಡೆ ಮತದಾನ ಮಾಡಿರುವುದು ಪತ್ತೆಯಾಗಿದೆ. ಇನ್ನು 3,83,884 ಮತದಾರರು ಇತರ ವರ್ಗಕ್ಕೆ ಸೇರಿದ್ದಾರೆ ಎಂದು ತಿಳಿಸಿದ್ದಾರೆ.
ಒಟ್ಟು 43,81,335 ಮತದಾರರಿಗೆ ಎಸ್ಐಆರ್ ಸಂಬಂಧ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ನೋಟಿಸ್ ನೀಡುವ ವಿಧಾನ ಸೇರಿದಂತೆ ಪರಿಶೀಲನಾ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ.
ಮತದಾರರ ವರ್ಗೀಕರಣ
- ಸಾಮಾನ್ಯ ಮತದಾರರು: 4,46,35,975
- 18ರಿಂದ 19 ವರ್ಷದ ಯುವ ಮತದಾರರು: 3,70,341
- 20ರಿಂದ 29 ವರ್ಷದ ಮತದಾರರು: 83,87,880
- 85 ವರ್ಷ ಮೇಲ್ಪಟ್ಟ ಮತದಾರರು: 3,92,302
- ಎನ್ಆರ್ಐ ಮತದಾರರು: 951
- ಸೇವೆಯಲ್ಲಿರುವ ಮತದಾರರು: 44,176
- ವಿಶೇಷ ಚೇತನ ಮತದಾರರು: 5,55,691
43 ಲಕ್ಷ ಮತದಾರರಿಗೆ ನೋಟಿಸ್
ಕರಡು ಮತದಾರರ ಪಟ್ಟಿಯಲ್ಲಿರುವ 43 ಲಕ್ಷಕ್ಕೂ ಅಧಿಕ ಮತದಾರರಿಗೆ ಹೆಚ್ಚುವರಿ ದಾಖಲೆಗಳ ಅಗತ್ಯವಿದ್ದಲ್ಲಿ ಮಾತ್ರ ನೋಟಿಸ್ ನೀಡಲಾಗುತ್ತದೆ. ನೋಟಿಸ್ನಲ್ಲಿ ಕಾರಣವನ್ನೂ ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತದೆ.
ನೋಟಿಸ್ಗಳನ್ನು ಮೊಬೈಲ್ ಸಂದೇಶದ ಮೂಲಕ ಕಳುಹಿಸುವುದಿಲ್ಲ. ಮತದಾರರ ಮನೆಗೆ ತೆರಳಿ ಖುದ್ದಾಗಿ ನೋಟಿಸ್ ನೀಡಲಾಗುತ್ತದೆ. ನೋಟಿಸ್ ಸ್ವೀಕರಿಸಿದ ಬಳಿಕ ಏಳು ದಿನಗಳ ಕಾಲ ಪ್ರತಿಕ್ರಿಯೆ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶವಿರುತ್ತದೆ.
ಈ ಪ್ರಕ್ರಿಯೆಗಾಗಿ 3 ಸಾವಿರಕ್ಕೂ ಅಧಿಕ ARO ಹಾಗೂ EROಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಕ್ಟೋಬರ್ 22ರೊಳಗೆ ನೋಟಿಸ್ ನೀಡುವ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಒಬ್ಬ AROಗೆ ಸರಾಸರಿ 1,000 ನೋಟಿಸ್ಗಳ ಜವಾಬ್ದಾರಿ ಇರಲಿದೆ.
ಮತದಾರರ ಹೆಸರು, ಹುಟ್ಟಿದ ದಿನಾಂಕ ಅಥವಾ ವಿಳಾಸದಲ್ಲಿ ತಿದ್ದುಪಡಿ ಮಾಡಬೇಕಿದ್ದರೆ ಫಾರ್ಮ್-8 ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ. ನೋಟಿಸ್ಗೆ ಸಂಬಂಧಿಸಿದ ಅಕ್ಷೇಪಣೆ ಹಾಗೂ ದಾಖಲೆಗಳನ್ನು ನಿಗದಿತ ಸ್ಥಳದಲ್ಲಿ ಸಲ್ಲಿಸಲು ಅವಕಾಶವಿರುತ್ತದೆ.
ನಗರ ಪ್ರದೇಶಗಳಲ್ಲಿ ‘ನೋ ಮ್ಯಾಪಿಂಗ್’ ಸಮಸ್ಯೆ
ನಗರ ಪ್ರದೇಶಗಳಲ್ಲಿ ‘ನೋ ಮ್ಯಾಪಿಂಗ್’ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ಸೆಪ್ಟೆಂಬರ್ 23ರೊಳಗೆ ಫಾರ್ಮ್-6 ಸಲ್ಲಿಸಿದರೆ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.



