ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಭೂಮಿಯಲ್ಲಿ ತೇವಾಂಶದ ಕೊರತೆ ಉಂಟಾಗಿ ತಿಮ್ಮಾಪೂರ, ಹರ್ಲಾಪೂರ ಸೇರಿದಂತೆ ವಿವಿಧ ಭಾಗಗಳಲ್ಲಿ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳು ‘ಮುಟುಗಿ’ ರೋಗಕ್ಕೆ ತುತ್ತಾಗುತ್ತಿವೆ. ಮೊಳಕೆ ಹಂತದಲ್ಲೇ ಬೆಳೆಗಳು ಭೂಮಿಯಿಂದ ಮೇಲೆ ಬರಲಾಗದೆ ಕಮರಿ, ಕೊಳೆತು ಹೋಗುತ್ತಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಿತ್ತನೆಗಾಗಿ ಸಾವಿರಾರು ರೂಪಾಯಿ ಮೌಲ್ಯದ ಬೀಜ, ಗೊಬ್ಬರ ಹಾಗೂ ಕೂಲಿ ವೆಚ್ಚ ಮಾಡಿದ ರೈತರಿಗೆ ಬೆಳೆ ಕೈಕೊಟ್ಟಿರುವುದರಿಂದ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿರುವ ರೈತರು ಇದೀಗ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ತಿಳಿಸಿದ್ದಾರೆ.
ಜಿಲ್ಲಾಡಳಿತ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಕ್ಷಣವೇ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಗಳಿಗೆ ತಗುಲಿರುವ ರೋಗದ ಕುರಿತು ತಜ್ಞರಿಂದ ಅಧ್ಯಯನ ನಡೆಸಬೇಕು. ಬೆಳೆ ನಷ್ಟದ ಸಮೀಕ್ಷೆ ಕೈಗೊಂಡು ರೈತರಿಗೆ ಸೂಕ್ತ ಪರಿಹಾರ ಹಾಗೂ ಬೆಳೆ ವಿಮೆ ದೊರಕಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ಒತ್ತಾಯಿಸಿದೆ.
ಮುಂದಿನ ಬಿತ್ತನೆಗೆ ಗುಣಮಟ್ಟದ ಬೀಜ, ಅಗತ್ಯ ಔಷಧ ಹಾಗೂ ತಾಂತ್ರಿಕ ಮಾರ್ಗದರ್ಶನ ಒದಗಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾಡಳಿತ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಯಲ್ಲಪ್ಪ ಎಚ್. ಬಾಬರಿ ಎಚ್ಚರಿಸಿದ್ದಾರೆ.
ಭೂಮಿಯಲ್ಲಿ ತೇವಾಂಶ ಇಲ್ಲದೆ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗಳು ಮುಟುಗಿ ರೋಗಕ್ಕೆ ತುತ್ತಾಗಿ, ಮೇಲೆ ಬರಲಾಗದೆ ಭೂಮಿಯಲ್ಲೇ ಕಮರಿ ಹೋಗುತ್ತಿವೆ. ರೈತರ ಕಣ್ಣೆದುರೇ ಬೆಳೆ ಸಾಯುತ್ತಿದೆ. ಬಿತ್ತನೆಗಾಗಿ ಮಾಡಿದ ಸಾಲ ಹೇಗೆ ತೀರಿಸಬೇಕು ಎಂಬ ಚಿಂತೆಯಲ್ಲಿ ರೈತರಿದ್ದಾರೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ತಜ್ಞರ ತಂಡದಿಂದ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು.
— ಯಲ್ಲಪ್ಪ ಎಚ್. ಬಾಬರಿ, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ



