ವಿಜಯಸಾಕ್ಷಿ ಸುದ್ದಿ, ಗದಗ: ಪವಿತ್ರ ಈದ್ ಮಿಲಾದ್ ದಿನದಂದು ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ‘ಡ್ರೈ ಡೇ’ ಘೋಷಿಸುವಂತೆ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ವತಿಯಿಂದ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಕುರಿತು ಮುಖ್ಯಮಂತ್ರಿ ಅವರಿಗೆ ಗದಗ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ ಮಹಾಸಭಾ ಪದಾಧಿಕಾರಿಗಳು, ಪ್ರವಾದಿ ಹಜರತ್ ಮಹಮ್ಮದ್ (ಸ್ವ) ಅವರ ಪವಿತ್ರ ಜನ್ಮದಿನವಾದ ಈದ್ ಮಿಲಾದ್ ಮುಸ್ಲಿಂ ಸಮುದಾಯಕ್ಕೆ ಅತ್ಯಂತ ಮಹತ್ವದ ದಿನವಾಗಿದೆ ಎಂದು ತಿಳಿಸಿದ್ದಾರೆ.
ಪ್ರವಾದಿ ಹಜರತ್ ಮಹಮ್ಮದ್ (ಸ್ವ) ಅವರು ಪ್ರೀತಿ, ಕರುಣೆ, ಶಾಂತಿ, ಸಮಾನತೆ, ಸಹೋದರತ್ವ ಹಾಗೂ ಸೌಹಾರ್ದತೆಯ ಸಂದೇಶ ಸಾರಿದ್ದರು. ಮನುಷ್ಯರೆಲ್ಲರೂ ಒಂದೇ ಮಾನವ ಕುಟುಂಬದವರು ಎಂಬ ಮಹಾನ್ ಸಂದೇಶವನ್ನು ನೀಡಿದ ಅವರು, ಪರಸ್ಪರ ಪ್ರೀತಿ, ಗೌರವ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಬದುಕುವ ಆದರ್ಶವನ್ನು ತಮ್ಮ ಜೀವನದ ಮೂಲಕ ಜಗತ್ತಿಗೆ ತೋರಿಸಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈದ್ ಮಿಲಾದ್ ದಿನದ ಪಾವಿತ್ರ್ಯ ಹಾಗೂ ಮಹತ್ವವನ್ನು ಗೌರವಿಸುವುದರ ಜತೆಗೆ ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ವಾತಾವರಣವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅಂದು ರಾಜ್ಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿ ಡ್ರೈ ಡೇ ಘೋಷಿಸಬೇಕು ಎಂದು ಮಹಾಸಭಾ ಸರ್ಕಾರವನ್ನು ಒತ್ತಾಯಿಸಿದೆ.
ಇದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಬೇಡಿಕೆಯಲ್ಲ. ಶಾಂತಿ, ಮಾನವೀಯತೆ ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಗೌರವಿಸುವ ಕರ್ನಾಟಕದ ಸಮಸ್ತ ಜನತೆಯ ಆಶಯವಾಗಿದೆ. ಹೀಗಾಗಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಈದ್ ಮಿಲಾದ್ ದಿನದಂದು ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧಿಸುವ ಕುರಿತು ಸೂಕ್ತ ಆದೇಶ ಹೊರಡಿಸಬೇಕು ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ರಾಜ್ಯಾಧ್ಯಕ್ಷ ಮಹ್ಮದಶಫಿ ಎಸ್. ನಾಗರಕಟ್ಟೆ ಮನವಿ ಮಾಡಿದ್ದಾರೆ.
ಮನವಿಯನ್ನು ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿಗಳು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಾಫರ ಡಾಲಾಯತ, ಮಹಬೂಬ್ ಬಾದಷಾ ಖಾಜಿ, ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹ್ಮದ್ ದೊಡ್ಡಮನಿ, ಕುತುಬುದ್ದೀನ್ ಶೇಖ, ಅಬ್ದುಲರಜ್ಜಾಕ ಮಂಗಳೂರು, ರಫೀಕ್ ಈಟಿ, ಸಲೀಂ ಕರಡಿ, ಯಾಸಿನ್ ಮುಲ್ಲಾ, ಅಫ್ಜಲ್ ಮನಿಯಾರ್, ಜೋಹರ ಮುಂಡರಗಿ, ಇಮ್ರಾನ್ ತಹಶೀಲ್ದಾರ್, ಮೀರಾಸಾಬ ಇರಕಲ್, ನಿಜಾಮುದ್ದೀನ್ ಕಾಟಾಪುರ್, ರಹೀಂ ಸಾಬ್ ದೊಡ್ಡಮನಿ, ಸಲೀಂ ನಾಲಬಂದ, ಮಕ್ತುಂ ಹುಸೇನ್ ಜಮಾದಾರ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.



