HomeGadag Newsಶೈಕ್ಷಣಿಕ ಪ್ರಗತಿಗೆ ಲಿಂಗರಾಜ ದೇಸಾಯಿ ಅವರ ದೂರದೃಷ್ಟಿಯೇ ಪ್ರೇರಣೆ: ಜ. ಅಭಿನವ ಬೂದಿಶ್ವರ ಮಹಾಸ್ವಾಮಿಗಳು

ಶೈಕ್ಷಣಿಕ ಪ್ರಗತಿಗೆ ಲಿಂಗರಾಜ ದೇಸಾಯಿ ಅವರ ದೂರದೃಷ್ಟಿಯೇ ಪ್ರೇರಣೆ: ಜ. ಅಭಿನವ ಬೂದಿಶ್ವರ ಮಹಾಸ್ವಾಮಿಗಳು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಲಿಂಗಾಯತ ಸಮಾಜದ ಶೈಕ್ಷಣಿಕ ಪ್ರಗತಿಗೆ ತ್ಯಾಗವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ ಅವರ ದೂರದೃಷ್ಟಿ, ತ್ಯಾಗ ಹಾಗೂ ಸೇವಾ ಮನೋಭಾವವೇ ಪ್ರಮುಖ ಪ್ರೇರಣೆಯಾಗಿದೆ. ಸಮಾಜದ ಭವಿಷ್ಯವನ್ನು ದೂರದೃಷ್ಟಿಯಿಂದ ಕಂಡು ಶಿಕ್ಷಣಕ್ಕೆ ಅವರು ನೀಡಿದ ಮಹತ್ವದಿಂದಾಗಿ ಇಂದು ಲಿಂಗಾಯತ ಸಮಾಜದವರು ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೊಸಳ್ಳಿಯ ಪೂಜ್ಯ ಜ. ಅಭಿನವ ಬೂದಿಶ್ವರ ಮಹಾಸ್ವಾಮಿಗಳು ಹೇಳಿದರು.

ನಗರದ ಕುಡುವಕ್ಕಲಿಗರ ಭವನದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ಲಿಂಗಾಯತ ಕುಡುವಕ್ಕಲಿಗರ ಸಂಘದ 14ನೇ ವಾರ್ಷಿಕ ಮಹಾಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ತ್ಯಾಗವೀರ ಲಿಂಗರಾಜ ದೇಸಾಯಿ ಅವರ 120ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸ್ವಾಮೀಜಿ, ಸಮಸ್ತ ಲಿಂಗಾಯತ ಸಮಾಜದ ಅಭಿವೃದ್ಧಿಗೆ ಲಿಂಗರಾಜ ದೇಸಾಯಿ ನೀಡಿದ ಕೊಡುಗೆ ಅಪಾರ. ಶಿಕ್ಷಣ, ಸಮಾಜಸೇವೆ ಹಾಗೂ ರೈತರ ಹಿತಕ್ಕಾಗಿ ಅವರು ಕೈಗೊಂಡ ಕಾರ್ಯಗಳು ಅವರ ಮಹಾನ್ ತ್ಯಾಗ ಮತ್ತು ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿವೆ ಎಂದರು.

ಲಿಂಗರಾಜ ದೇಸಾಯಿ ಅವರ ದೂರದೃಷ್ಟಿ ಹಾಗೂ ಸೇವಾ ಮನೋಭಾವವನ್ನು ಇಂದಿನ ಪೀಳಿಗೆ ಆದರ್ಶವಾಗಿಸಿಕೊಂಡು ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಂಘದ ಕೋಶಾಧ್ಯಕ್ಷ ಎ.ಎಸ್. ಪಾಟೀಲ ಮಾತನಾಡಿ, ಲಿಂಗರಾಜ ದೇಸಾಯಿ ಅವರು ಕಾಶಿಯಲ್ಲಿ ಅಧ್ಯಯನ ಪೀಠ ಸ್ಥಾಪಿಸುವಲ್ಲಿ ವಹಿಸಿದ ಪಾತ್ರ ಹಾಗೂ ಬರಗಾಲದ ಸಂದರ್ಭದಲ್ಲಿ ಕೆರೆ-ಕಟ್ಟೆಗಳನ್ನು ನಿರ್ಮಿಸಿ ರೈತರಿಗೆ ನೆರವಾದ ಸೇವೆಯನ್ನು ಸ್ಮರಿಸಿದರು.

ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರು, ಇಬ್ಬರು ಮಾಜಿ ಸೈನಿಕರು, ಶ್ರೇಷ್ಠ ರೈತರು, ಗೌರವ ಡಾಕ್ಟರೇಟ್ ಪದವಿ ಪಡೆದವರು ಹಾಗೂ ಪರ್ವತಾರೋಹಿಯನ್ನು ಸನ್ಮಾನಿಸಲಾಯಿತು.

ಕುಡುವಕ್ಕಲಿಗರ ಭವನದ ನಿರ್ಮಾಣಕ್ಕೆ ನೆರವಾಗುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಬಂಪರ್ ಲಾಟರಿ ಯೋಜನೆಯ ಡ್ರಾ ನೆರವೇರಿಸಲಾಯಿತು. ಸಂಘದ ಕಾರ್ಯದರ್ಶಿ ಶರಣಪ್ಪ ದಿಡ್ಡಿಮನಿ ವಾರ್ಷಿಕ ವರದಿ ಹಾಗೂ ಆಯವ್ಯಯ ಪತ್ರಿಕೆ ಮಂಡಿಸಿದರು. ಸಭೆಯಲ್ಲಿ ಚರ್ಚಿಸಿ ಅದನ್ನು ಅನುಮೋದಿಸಲಾಯಿತು.

ಸಮಾಜದ ಹಿರಿಯರಾದ ಕಲ್ಲನಗೌಡ್ರ, ಈರಪ್ಪಣ್ಣ ಬಿಸನಹಳ್ಳಿ, ವಿ.ಜಿ. ಕನಾಜ, ಸಿ.ಎನ್. ಜನಯಿ ಹಾಗೂ ವಿ.ಕೆ. ಬಳಗೇರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಯಲ್ಲಪ್ಪಗೌಡ ಸಂಕನಗೌಡ ಪ್ರಾರ್ಥಿಸಿದರು. ಪ್ರಶಾಂತ ಕನಾಜ ನಿರೂಪಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img