ವಿಜಯಸಾಕ್ಷಿ ಸುದ್ದಿ, ತಿಮ್ಮಾಪೂರ: ರೋಣ ಮತಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್. ಪಾಟೀಲರನ್ನು ತಿಮ್ಮಾಪೂರ ಗ್ರಾಮದ ಮುಖಂಡರು ಭೇಟಿ ಮಾಡಿ ಶಾಲು, ಹೂಗುಚ್ಛ ನೀಡಿ ಸನ್ಮಾನಿಸಿ, ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮಾತನಾಡಿ, ತಿಮ್ಮಾಪೂರ ಕೃಷಿ ಪ್ರಧಾನ ಗ್ರಾಮವಾಗಿದ್ದು, ಮೂಲಸೌಕರ್ಯಗಳ ಕೊರತೆಯಿಂದ ರೈತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು. ಸಭಾಧ್ಯಕ್ಷರು ವಿಶೇಷ ಮುತುವರ್ಜಿ ವಹಿಸಿ ಅಗತ್ಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.
ತಿಮ್ಮಾಪೂರ–ಹರ್ಲಾಪೂರ ರಸ್ತೆ ಡಾಂಬರೀಕರಣ, ರೈತ ಸಂಘಕ್ಕೆ ರೈತ ಭವನ ನಿರ್ಮಾಣ, ರೇಣುಕಾದೇವಿ ದೇವಸ್ಥಾನಕ್ಕೆ ಅನುದಾನ, ರೈತರ ಹೊಲದ ದಾರಿಗಳ ಅಭಿವೃದ್ಧಿ, ಗ್ರಾಮದ ಸಿ.ಸಿ. ರಸ್ತೆಗಳ ನಿರ್ಮಾಣ, ಕೊಟುಮಚಗಿ ರಸ್ತೆ ಹಾಗೂ ಕಾಣೆ ಹಳ್ಳಕ್ಕೆ ಮೇಲ್ಸೇತುವೆ, ಹಳ್ಳಿಗುಡಿ–ಸೋಂಪುರ ರಸ್ತೆ ಡಾಂಬರೀಕರಣ, ಸ್ಮಶಾನ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಕೋರಲಾಯಿತು.
ಸಂಗೊಳ್ಳಿ ರಾಯಣ್ಣ ಪುತ್ಥಳಿ ಬಳಿ ಹಳ್ಳಕ್ಕೆ ಸ್ಲ್ಯಾಬ್ ನಿರ್ಮಾಣ ಹಾಗೂ ಅಪೂರ್ಣಗೊಂಡಿರುವ ಚೌಕಿ ಬಸವೇಶ್ವರ, ಕನಕ ಮತ್ತು ಮಾರುತೇಶ್ವರ ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡುವಂತೆಯೂ ಮನವಿ ಮಾಡಲಾಯಿತು.
ಮನವಿ ಸ್ವೀಕರಿಸಿದ ಜಿ.ಎಸ್. ಪಾಟೀಲರು, ತಿಮ್ಮಾಪೂರ ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳಿಗೆ ಹಂತ ಹಂತವಾಗಿ ಅನುದಾನ ಒದಗಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಾಳಪ್ಪ ಗಂಗರಾತ್ರಿ, ಶರಣಪ್ಪ ಜೋಗಿನ, ಶಿವಕುಮಾರ ಯತ್ನಟ್ಟಿ, ಭೀಮಪ್ಪ ರಾಮಜಿ, ರಾಜಾಸಾಬ್ ನಧಾಪ, ಹನುಮಂತ ರಾಮಜಿ, ರಫೀಕಸಾಬ ನಧಾಪ, ಕಪ್ಪತ್ತಪ್ಪ ಸೋಂಪೂರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.



