ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಹಾಗೂ ಐತಿಹಾಸಿಕ ‘ಊರ್ವಶಿ’ ಚಿತ್ರಮಂದಿರದ ನೆಲಸಮ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಚಿತ್ರಮಂದಿರದ ಕಟ್ಟಡದಲ್ಲಿರುವ ಯಾವುದೇ ವಸ್ತುಗಳನ್ನು ತೆರವುಗೊಳಿಸದಂತೆ ಭೂಮಾಲೀಕರಿಗೆ ಹೈಕೋರ್ಟ್ನ ಏಕಸದಸ್ಯ ಪೀಠ ಸ್ಪಷ್ಟ ನಿರ್ದೇಶನ ನೀಡಿದೆ.
ಸೋಮವಾರ ಊರ್ವಶಿ ಚಿತ್ರಮಂದಿರವನ್ನು ನೆಲಸಮಗೊಳಿಸುವ ಪ್ರಕ್ರಿಯೆ ಆರಂಭವಾಗಿತ್ತು. ಇದರಿಂದ ಬೆಂಗಳೂರಿನ ಸಿನಿಪ್ರಿಯರಲ್ಲಿ ಬೇಸರ ಮೂಡಿತ್ತು. ಇದೀಗ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವುದು ಚಿತ್ರಪ್ರೇಮಿಗಳಿಗೆ ಕೊಂಚ ನೆಮ್ಮದಿ ತಂದಿದೆ.
ಸೆ.30ರವರೆಗೆ ಕಾಲಾವಕಾಶ:
ಚಿತ್ರಮಂದಿರದ ಜಾಗವನ್ನು ಖಾಲಿ ಮಾಡುವಂತೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿದೆ. ಆದರೆ, ಈ ಗಡುವಿಗೂ ಮುನ್ನವೇ ಭೂಮಾಲೀಕರು ಜಾಗವನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎಂದು ಊರ್ವಶಿ ಚಿತ್ರಮಂದಿರದ ಆಡಳಿತ ಮಂಡಳಿ ಆರೋಪಿಸಿದೆ.
ಈ ವೇಳೆ ಚಿತ್ರಮಂದಿರದಲ್ಲಿದ್ದ ಬೆಲೆಬಾಳುವ ಪ್ರೊಜೆಕ್ಟರ್, ಸ್ಕ್ರೀನ್ ಹಾಗೂ ಸೀಟುಗಳಿಗೆ ಹಾನಿಯಾಗಿದೆ ಎಂದು ಚಿತ್ರಮಂದಿರದ ಪರ ಹಿರಿಯ ವಕೀಲ ಶ್ಯಾಮ್ಸುಂದರ್ ಹೈಕೋರ್ಟ್ನಲ್ಲಿ ವಾದ ಮಂಡಿಸಿದರು.
ಭೂಮಾಲೀಕರ ಪರ ವಕೀಲರಿಂದ ಆಕ್ಷೇಪ:
ಇದಕ್ಕೆ ಪ್ರತಿಯಾಗಿ ಭೂಮಾಲೀಕರ ಪರ ವಕೀಲರು ವಾದ ಮಂಡಿಸಿ, ಸುಪ್ರೀಂ ಕೋರ್ಟ್ ಸೂಚಿಸಿರುವ ನಿಯಮಗಳಂತೆ ಚಿತ್ರಮಂದಿರದ ಆಡಳಿತ ಮಂಡಳಿ ಅಗತ್ಯ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ. ಹೀಗಾಗಿ ಈ ಹಂತದಲ್ಲಿ ತಡೆಯಾಜ್ಞೆ ನೀಡಬಾರದು ಎಂದು ಪೀಠಕ್ಕೆ ಮನವಿ ಮಾಡಿದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ಹೈಕೋರ್ಟ್, ಸುಪ್ರೀಂ ಕೋರ್ಟ್ ಸೂಚನೆಯಂತೆ ಅಗತ್ಯ ಪ್ರಮಾಣಪತ್ರವನ್ನು ತಕ್ಷಣ ಸಲ್ಲಿಸುವಂತೆ ಊರ್ವಶಿ ಚಿತ್ರಮಂದಿರದವರಿಗೆ ಸೂಚಿಸಿದೆ.
ನಾಳೆ ಮತ್ತೆ ವಿಚಾರಣೆ:
ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಲಾಗಿದೆ. ಅಲ್ಲಿಯವರೆಗೆ ಚಿತ್ರಮಂದಿರವನ್ನು ನೆಲಸಮಗೊಳಿಸಬಾರದು. ಕಟ್ಟಡದಲ್ಲಿರುವ ಯಾವುದೇ ವಸ್ತು ಅಥವಾ ಸಾಮಗ್ರಿಗಳನ್ನು ತೆರವುಗೊಳಿಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳ ಪೈಕಿ ಊರ್ವಶಿ ಕೂಡ ಒಂದಾಗಿತ್ತು. ಸಾವಿರಕ್ಕೂ ಹೆಚ್ಚು ಆಸನಗಳನ್ನು ಹೊಂದಿರುವ ಈ ಚಿತ್ರಮಂದಿರದಲ್ಲಿ 5 ಸಾವಿರಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನಗೊಂಡಿವೆ ಎಂದು ತಿಳಿದುಬಂದಿದೆ.
ಹಲವು ಸಿನಿಮಾಗಳು ಇಲ್ಲಿ ಬ್ಲಾಕ್ಬಸ್ಟರ್ ಆಗಿ ದಾಖಲೆ ನಿರ್ಮಿಸಿವೆ. ಬೆಂಗಳೂರಿನ ಸಿನಿಮಾ ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಊರ್ವಶಿ ಚಿತ್ರಮಂದಿರದೊಂದಿಗೆ ಹಲವು ತಲೆಮಾರುಗಳ ಸಿನಿಪ್ರಿಯರ ನೆನಪುಗಳು ಬೆಸೆದುಕೊಂಡಿವೆ.
ಹೀಗಾಗಿ ಊರ್ವಶಿ ಚಿತ್ರಮಂದಿರ ನೆಲಸಮ ಪ್ರಕ್ರಿಯೆಗೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿರುವುದು ಸಿನಿಪ್ರಿಯರಲ್ಲಿ ಸಂತಸ ಮೂಡಿಸಿದೆ.



