ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಭೀಷ್ಮ ಕೆರೆಯಲ್ಲಿ ಚರಂಡಿ ಕೊಳಚೆ ನೀರು ಹಾಗೂ ಹಂದಿ, ನಾಯಿಗಳ ತ್ಯಾಜ್ಯ ಸೇರಿ ನೀರು ಕಲುಷಿತಗೊಂಡಿದ್ದು, ಇಂತಹ ನೀರಿನಲ್ಲಿ ಶ್ರದ್ಧಾಭಕ್ತಿಯಿಂದ ಪೂಜಿಸಿದ ಗಣೇಶ ಮೂರ್ತಿಗಳನ್ನು ವಿಸರ್ಜಿಸುವುದು ಭಕ್ತರ ಭಾವನೆಗಳಿಗೆ ನೋವುಂಟು ಮಾಡುತ್ತಿದೆ. ಹೀಗಾಗಿ ಗಣೇಶ ವಿಸರ್ಜನೆಗೆ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸುದರ್ಶನ ಚಕ್ರ ಯುವ ಮಂಡಳ ಗದಗ-ಬೆಟಗೇರಿ ನಗರಸಭೆಗೆ ಮನವಿ ಮಾಡಿದೆ.
ಈ ಕುರಿತು ಸೋಮವಾರ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ ಮಂಡಳದ ಅಧ್ಯಕ್ಷ ರಾಘವೇಂದ್ರ ಹಬೀಬ ಅವರು, ಗಣೇಶ ವಿಸರ್ಜನೆಗೆ ಇನ್ನೂ ಸಾಕಷ್ಟು ಕಾಲಾವಕಾಶವಿರುವುದರಿಂದ ಕೂಡಲೇ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಒತ್ತಾಯಿಸಿದರು.
ಗದಗ ನಗರದಲ್ಲಿ ಹಲವು ವರ್ಷಗಳಿಂದ ಭೀಷ್ಮ ಕೆರೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡುವ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನಗರದ ಚರಂಡಿ ನೀರು ಹಾಗೂ ಹಂದಿಗಳ ತ್ಯಾಜ್ಯ ನೇರವಾಗಿ ಕೆರೆಗೆ ಸೇರುತ್ತಿದ್ದು, ಕೆರೆಯ ನೀರು ಕಲುಷಿತಗೊಂಡಿದೆ. ಇದರಿಂದ ಕೆರೆಯ ಪಾವಿತ್ರ್ಯವೂ ಹಾಳಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಭಕ್ತರು ಐದು, ಒಂಬತ್ತು, ಹನ್ನೊಂದು, ಇಪ್ಪತ್ತೊಂದು ದಿನಗಳ ಕಾಲ ಗಣೇಶ ಮೂರ್ತಿಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜಿಸಿ, ಕೊನೆಗೆ ಕೊಳಕು ಹಾಗೂ ದುರ್ವಾಸನೆಯ ನೀರಿನಲ್ಲಿ ವಿಸರ್ಜಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ನೋವುಂಟು ಮಾಡುವ ಸಂಗತಿಯಾಗಿದೆ. ಆದ್ದರಿಂದ ಭಕ್ತರ ಭಾವನೆಗಳಿಗೆ ಬೆಲೆ ನೀಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೃತಕ ಹೊಂಡ ನಿರ್ಮಿಸಲು ಆಗ್ರಹ
ಭೀಷ್ಮ ಕೆರೆಯ ಪಕ್ಕದಲ್ಲಿಯೇ ಸುಮಾರು 60×100 ಅಡಿ ಅಳತೆಯ ತಾತ್ಕಾಲಿಕ ಕೃತಕ ಹೊಂಡ ನಿರ್ಮಿಸಿ, ಅದರಲ್ಲಿ ಶುದ್ಧ ನೀರು ತುಂಬಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ಭಕ್ತರು ಯಾವುದೇ ಅಳುಕಿಲ್ಲದೆ ಶ್ರದ್ಧಾಭಕ್ತಿಯಿಂದ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಅನುಕೂಲವಾಗಲಿದೆ. ಗಣೇಶ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹೊಂಡ ನಿರ್ಮಾಣಕ್ಕೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಂಡಳದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ರಾಘವೇಂದ್ರ ಹಬೀಬ, ಮಾರುತಿ ದಹಿಂಡೆ, ವಿಜಯ ಬನಹಟ್ಟಿ, ರಾಜು ನಾಯ್ಕರ್, ವಿಜಯ ಸೋಳಂಕಿ, ರತ್ನಾ ಕುರುಗೋಡ, ಆಕಾಶ್ ಗುಜ್ಜರ, ಸಾಗರ ಮಡಿವಾಳರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



