HomeGadag Newsಕಪ್ಪತಗುಡ್ಡದ ಮಡಿಲಲ್ಲಿ ಕವಿಗಳ ಸಮಾಗಮ; ಕವಿತೆಗಳ ಕಲರವ!

ಕಪ್ಪತಗುಡ್ಡದ ಮಡಿಲಲ್ಲಿ ಕವಿಗಳ ಸಮಾಗಮ; ಕವಿತೆಗಳ ಕಲರವ!

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯ ಪರಿಸರದ ಕೂಸು. ಪ್ರಕತಿಯ ಎಲ್ಲ ಅಂಶಗಳನ್ನು ಒಳಗೊಂಡೇ ಮಾನವ ರೂಪುಗೊಂಡಿದ್ದು, ಪರಿಸರದಲ್ಲಿನ ಪ್ರತಿಯೊಂದು ಚಟುವಟಿಕೆಯ ಪ್ರಭಾವವೂ ಮನುಷ್ಯನ ದೇಹದ ಮೇಲಾಗುತ್ತದೆ. ಹೀಗಾಗಿ ಕವಿ ಸದಾ ಪರಿಸರ ಪ್ರೇಮ ಬೆಳೆಸಿಕೊಂಡು, ತನ್ನ ಕವಿತೆಗಳ ಮೂಲಕ ಪ್ರಕೃತಿಯ ಋಣ ತೀರಿಸುವ ಪ್ರಯತ್ನ ಮಾಡಬೇಕು. ಕವಿಯಲ್ಲಿ ಪರಿಸರ ಪ್ರಜ್ಞೆ ಸದಾ ಜಾಗೃತವಾಗಿರಬೇಕು ಹಾಗೂ ಅದು ಕಾವ್ಯದಲ್ಲಿ ಪ್ರತಿಬಿಂಬಿಸಬೇಕು ಎಂದು ಸಾಹಿತಿ ಡಿ.ವಿ. ಬಡಿಗೇರ ಹೇಳಿದರು.

ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ತಾಲೂಕುಗಳ ಕನ್ನಡ ಸಾಹಿತ್ಯ ಪರಿಷತ್ತುಗಳ ಆಶ್ರಯದಲ್ಲಿ ಕಪ್ಪತಗುಡ್ಡದ ಸೆರಗಿನ ದೇವರೆಡ್ಡಿ ಅಗಸನಕೊಪ್ಪ ಕೃಷಿ ಆಶ್ರಮದಲ್ಲಿ ನಡೆದ ಜಿಲ್ಲಾ ಮಟ್ಟದ ಕವಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿಯ ಆರಾಧನೆಯನ್ನು ಎಲ್ಲ ಕವಿಗಳು ಮಾಡಿಕೊಂಡು ಬಂದಿದ್ದಾರೆ. ಕುವೆಂಪು ಹಾಗೂ ಬೇಂದ್ರೆ ಅವರ ಕಾವ್ಯಗಳಲ್ಲಿ ಪ್ರಕೃತಿ ಪ್ರೇಮ ಹಾಸುಹೊಕ್ಕಾಗಿದೆ. ಪ್ರಕೃತಿಯಲ್ಲಿ ನಿತ್ಯ ನಡೆಯುವ ಕ್ರಿಯೆಗಳನ್ನು ಪ್ರತಿಮೆ ಹಾಗೂ ರೂಪಕಗಳನ್ನಾಗಿಸಿಕೊಂಡು ಅವರು ಅದ್ಭುತ ಕಾವ್ಯವನ್ನು ಸೃಷ್ಟಿಸಿದ್ದಾರೆ ಎಂದು ಬಡಿಗೇರ ತಿಳಿಸಿದರು. ಇದೇ ಸಂದರ್ಭದಲ್ಲಿ ಕುವೆಂಪು ಅವರ ‘ಪಕ್ಷಿಕಾಶಿ’ ಕವಿತೆಗಳನ್ನು ವಾಚಿಸಿದರು.

ಸಾನ್ನಿಧ್ಯ ವಹಿಸಿದ್ದ ಡೋಣಿ ನಂದಿವೇರಿ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಮಾತನಾಡಿ, ಕಾವ್ಯ, ಸಾಹಿತ್ಯ ಹಾಗೂ ಕವನಗಳು ಕವಿಯ ಒಳತುಡಿತದಿಂದ ರೂಪುಗೊಳ್ಳುತ್ತವೆ. ಪರಿಸರದಿಂದ ದೊರೆಯುವ ಏಕಾಂತತೆ ಕವನ ರಚನೆಗೆ ಪೂರಕವಾಗಿರುತ್ತದೆ ಎಂದರು.

ಮನುಷ್ಯ ಪರಿಸರದಿಂದ ದೂರವಾಗುತ್ತಾ ರೋಗಗಳನ್ನು ಹತ್ತಿರ ಮಾಡಿಕೊಳ್ಳುತ್ತಿದ್ದಾನೆ. ಕವಿಗಳು ಕಪ್ಪತಗುಡ್ಡದ ಪರಿಸರದ ಮಡಿಲಿಗೆ ಆಗಮಿಸಿರುವುದು ತವರುಮನೆಗೆ ಬಂದಂತಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಹಿರಿಯ ಕವಿಗಳು ಕಿರಿಯ ಕವಿಗಳನ್ನು ಪ್ರೋತ್ಸಾಹಿಸುವ ಮೂಲಕ ಕಾವ್ಯವು ಹುಲುಸಾಗಿ ಹಾಗೂ ಸತ್ವಯುತವಾಗಿ ಬೆಳೆಯಲು ಸಹಕರಿಸಬೇಕು ಎಂದರು.

ಈ ಹಿನ್ನೆಲೆಯಲ್ಲಿ ಕವಿಗಳ ಸಮಾಗಮದ ಉದ್ದೇಶವನ್ನು ಈ ಸಮ್ಮೇಳನ ಹೊಂದಿದೆ. ಯುವ ಕವಿಗಳು ಹೆಚ್ಚು ಓದು ಹಾಗೂ ಚರ್ಚೆಗಳ ಮೂಲಕ ಕಾವ್ಯ ಪರಂಪರೆಯನ್ನು ಮುಂದುವರಿಸಬೇಕು ಎಂದು ಹೇಳಿದರು.

ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ಕಪ್ಪತಗುಡ್ಡದ ಜೀವವೈವಿಧ್ಯತೆ ಕುರಿತು ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ಚಂದ್ರಶೇಖರ ವಸ್ತ್ರದ, ಡಾ. ಬಿ.ಜಿ. ಪಾಟೀಲ, ದೇವರೆಡ್ಡಿ ಅಗಸನಕೊಪ್ಪ, ಸುಶೀಲಮ್ಮ ಅಗಸನಕೊಪ್ಪ, ರಮಾಕಾಂತ ಕಮತಗಿ, ಎಂ.ಜಿ. ಗಚ್ಚಣ್ಣವರ, ಸುರೇಶ ಕುಂಬಾರ, ಡಿ.ಎಲ್. ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಿಶೋರಬಾಬು ಸ್ವಾಗತಿಸಿದರು. ಈಶ್ವರ ಮೆಡ್ಲೇರಿ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಕವಿಗಳು ಕವಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಧ್ವಜಾರೋಹಣ ಹಾಗೂ ಭುವನೇಶ್ವರಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img