ಮಡಿಕೇರಿ: ರಾಜ್ಯದ ಕೆಲವೆಡೆ ಮಳೆ ಕೊರತೆ ಎದುರಾಗಿರುವ ನಡುವೆ ಕಾವೇರಿಯ ತವರು ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ.
ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾಗಮಂಡಲ ಹಾಗೂ ಬ್ರಹ್ಮಗಿರಿ ತಪ್ಪಲಿನಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಪವಿತ್ರ ತ್ರಿವೇಣಿ ಸಂಗಮ ಹಾಗೂ ಸಮೀಪದ ಉದ್ಯಾನವನ ಈ ಮಳೆಗಾಲದಲ್ಲಿ ಮೂರನೇ ಬಾರಿಗೆ ಸಂಪೂರ್ಣ ಜಲಾವೃತಗೊಂಡಿದೆ.
ಹಾರಂಗಿ ಜಲಾಶಯಕ್ಕೂ ಹೆಚ್ಚಿದ ಒಳಹರಿವು:
ಜಿಲ್ಲೆಯ ಹಾರಂಗಿ ಜಲಾನಯನ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಸೋಮವಾರ ರಾತ್ರಿಯಿಂದ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಬಿರುಸಿನ ಮಳೆ ಮುಂದುವರಿದಿದೆ.
ನಿರಂತರ ಮಳೆಯಿಂದಾಗಿ ನದಿ ಪಾತ್ರದ ಪ್ರದೇಶಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ನದಿ ಪಾತ್ರದ ಜನರು ಹಾಗೂ ಪ್ರವಾಸಿಗರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಕಾಫಿ, ಮೆಣಸು ಬೆಳೆಗಾರರಲ್ಲಿ ಆತಂಕ:
ಇನ್ನು ಕೊಡಗಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕಾಫಿ, ಮೆಣಸು ಸೇರಿದಂತೆ ಹಲವು ಬೆಳೆಗಳ ಮೇಲೂ ಪರಿಣಾಮ ಬೀರುವ ಆತಂಕ ರೈತರಲ್ಲಿ ಮೂಡಿದೆ.
ನಿರಂತರ ಮಳೆಯಿಂದ ಕಾಫಿ ತೋಟಗಳಲ್ಲಿರುವ ಹೂವು ಹಾಗೂ ಕಾಯಿಗಳು ಉದುರುವ ಸಾಧ್ಯತೆ ಇದ್ದು, ಇದರಿಂದ ಇಳುವರಿ ಮೇಲೆ ಪರಿಣಾಮ ಬೀರುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ.
ಒಂದೆಡೆ ರಾಜ್ಯದಲ್ಲಿ ಮಳೆ ಕೊರತೆ ನೀಗಿಸಲು ಮೋಡ ಬಿತ್ತನೆ ಕುರಿತು ಚರ್ಚೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಕೊಡಗಿನಲ್ಲಿ ವರುಣನ ಅಬ್ಬರದಿಂದ ಕಾವೇರಿ ಉಕ್ಕಿ ಹರಿಯುತ್ತಿರುವುದು ಗಮನ ಸೆಳೆದಿದೆ.



