ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದ ತನಿಖೆಯನ್ನು CID ತೀವ್ರಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 329 ಅಭ್ಯರ್ಥಿಗಳಿಗೆ CID ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿದೆ.
ಜಾರಿ ನಿರ್ದೇಶನಾಲಯ (ED) ನಡೆಸಿದ ವಿಚಾರಣೆ ವೇಳೆ ಕೆಲವರು ಅಕ್ರಮದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ CID ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ED ವಿಚಾರಣೆಯಲ್ಲಿ ಲಭ್ಯವಾದ ಮಾಹಿತಿ ಹಾಗೂ ಹೇಳಿಕೆಗಳನ್ನು ಆಧರಿಸಿ 329 ಅಭ್ಯರ್ಥಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ನೋಟಿಸ್ ಪಡೆದಿರುವ ಎಲ್ಲ 329 ಅಭ್ಯರ್ಥಿಗಳು ಇಂದೇ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ CID ಅಧಿಕಾರಿಗಳು ಸೂಚಿಸಿದ್ದಾರೆ. ಅಭ್ಯರ್ಥಿಗಳ ವಿಚಾರಣೆ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯೇ, ಅಕ್ರಮದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ.
ಇಷ್ಟು ದೊಡ್ಡ ಸಂಖ್ಯೆಯ ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ನೋಟಿಸ್ ನೀಡಿರುವುದು ಪ್ರಕರಣದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ತನಿಖೆಯ ವೇಳೆ ಅಕ್ರಮದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳು ಹಾಗೂ ಪ್ರಭಾವಿಗಳ ಹೆಸರುಗಳು ಹೊರಬರುವ ಸಾಧ್ಯತೆಯೂ ಇದೆ.
ಈಗಾಗಲೇ 329 ಅಭ್ಯರ್ಥಿಗಳಿಂದ ವಶಪಡಿಸಿಕೊಂಡಿರುವ 658 OMR ಕಾರ್ಬನ್ ಶೀಟ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದೆ.
ಅಭ್ಯರ್ಥಿಗಳ ಮೂಲ OMR ಶೀಟ್ಗಳು ಮತ್ತು ಅವರಿಂದ ವಶಪಡಿಸಿಕೊಂಡಿರುವ ಕಾರ್ಬನ್ ಶೀಟ್ಗಳನ್ನು ತಾಳೆ ಹಾಕಿ ಪರಿಶೀಲಿಸುವ ಉದ್ದೇಶದಿಂದ FSLಗೆ ಕಳುಹಿಸಲಾಗಿದೆ. ಪರೀಕ್ಷೆಯ ಬಳಿಕ ಪರೀಕ್ಷಾ ಉತ್ತರ ಪತ್ರಿಕೆಗಳಲ್ಲಿ ಯಾವುದೇ ರೀತಿಯ ತಿದ್ದುಪಡಿ ಅಥವಾ ಅಕ್ರಮ ನಡೆದಿದೆಯೇ ಎಂಬ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.
ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಗೋಲ್ಮಾಲ್ ಕುರಿತು CID ಅಧಿಕಾರಿಗಳು ಅಭ್ಯರ್ಥಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ. ಅಭ್ಯರ್ಥಿಗಳ ಹೇಳಿಕೆಗಳು, OMR ಶೀಟ್ಗಳ ಪರಿಶೀಲನೆ ಹಾಗೂ EDಯಿಂದ ಲಭ್ಯವಾದ ಮಾಹಿತಿಯನ್ನು ಆಧರಿಸಿ ತನಿಖೆ ಮುಂದುವರಿಯಲಿದೆ.
ಈ ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಗಳು ಹಾಗೂ ಅಕ್ರಮದಲ್ಲಿ ಭಾಗಿಯಾಗಿರುವವರ ವಿವರಗಳು ಹೊರಬರುವ ಸಾಧ್ಯತೆಯಿದೆ.



