ಬೆಂಗಳೂರು: ನೆಲಸಮದ ಪ್ರಕ್ರಿಯೆ ಆರಂಭವಾಗಿದ್ದ ಬೆಂಗಳೂರಿನ ಐತಿಹಾಸಿಕ ‘ಊರ್ವಶಿ’ ಚಿತ್ರಮಂದಿರಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ. ಕಟ್ಟಡ ಧ್ವಂಸ ಮಾಡುವುದು ಮಾತ್ರವಲ್ಲದೆ, ಒಳಗಿರುವ ಯಾವುದೇ ವಸ್ತುಗಳನ್ನು ತೆರವುಗೊಳಿಸದಂತೆ ಭೂಮಾಲೀಕರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಚಿತ್ರಮಂದಿರದ ಜಾಗವನ್ನು ಖಾಲಿ ಮಾಡಲು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30ರವರೆಗೆ ಗಡುವು ನೀಡಿರುವುದಾಗಿ ‘ಊರ್ವಶಿ’ ಆಡಳಿತ ಮಂಡಳಿ ತಿಳಿಸಿದೆ. ಆದರೆ, ಗಡುವಿಗೂ ಮುನ್ನವೇ ಭೂಮಾಲೀಕರು ಸ್ಥಳ ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂಬುದು ಚಿತ್ರಮಂದಿರದ ಪರ ವಾದವಾಗಿತ್ತು.
ಸ್ಥಳ ವಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಚಿತ್ರಮಂದಿರದ ದುಬಾರಿ ಪ್ರೊಜೆಕ್ಟರ್, ಸ್ಕ್ರೀನ್ ಹಾಗೂ ಸೀಟುಗಳಿಗೆ ಹಾನಿಯಾಗಿದೆ ಎಂದು ಹಿರಿಯ ವಕೀಲ ಶ್ಯಾಮ್‌ಸುಂದರ್ ಹೈಕೋರ್ಟ್‌ನಲ್ಲಿ ಆರೋಪಿಸಿದ್ದಾರೆ.
ಭೂಮಾಲೀಕರ ಪರ ವಕೀಲರು ಇದನ್ನು ವಿರೋಧಿಸಿ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಗತ್ಯ ಪ್ರಮಾಣಪತ್ರವನ್ನು ಚಿತ್ರಮಂದಿರದ ಆಡಳಿತ ಮಂಡಳಿ ಸಲ್ಲಿಸಿಲ್ಲ. ಹೀಗಾಗಿ ತಡೆಯಾಜ್ಞೆ ನೀಡಲು ಯಾವುದೇ ಆಧಾರವಿಲ್ಲ ಎಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಸುಪ್ರೀಂ ಕೋರ್ಟ್ ಸೂಚನೆಯಂತೆ ಅಗತ್ಯ ಪ್ರಮಾಣಪತ್ರ ಸಲ್ಲಿಸುವಂತೆ ‘ಊರ್ವಶಿ’ ಆಡಳಿತ ಮಂಡಳಿಗೆ ಸೂಚಿಸಿತು. ಆಗಸ್ಟ್ 25ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ನೆಲಸಮ ಕಾರ್ಯ ಹಾಗೂ ಯಾವುದೇ ವಸ್ತುಗಳ ತೆರವು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ.
ಬೆಂಗಳೂರು ನಗರದ ಸಿನಿಮಾ ಸಂಸ್ಕೃತಿಯೊಂದಿಗೆ ದಶಕಗಳಿಂದ ಗುರುತಿಸಿಕೊಂಡಿರುವ ‘ಊರ್ವಶಿ’ಯಲ್ಲಿ ಸಾವಿರಕ್ಕೂ ಅಧಿಕ ಆಸನಗಳಿವೆ. ಐದು ಸಾವಿರಕ್ಕೂ ಹೆಚ್ಚು ಸಿನಿಮಾಗಳು ಇಲ್ಲಿ ತೆರೆಕಂಡಿದ್ದು, ಹಲವು ಚಿತ್ರಗಳು ಬ್ಲಾಕ್‌ಬಸ್ಟರ್ ಯಶಸ್ಸು ಕಂಡಿವೆ. ಹೀಗಾಗಿ ಚಿತ್ರಮಂದಿರದ ಭವಿಷ್ಯದ ಕುರಿತು ನಡೆಯುತ್ತಿರುವ ಕಾನೂನು ಹೋರಾಟದ ಮೇಲೆ ಸಿನಿಪ್ರಿಯರ ಗಮನ ನೆಟ್ಟಿದೆ.



