ಲಕ್ನೋ: ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ಕೋರಿ ವಿದ್ಯಾರ್ಥಿನಿಯೊಬ್ಬಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಪ್ರಯಾಗ್ರಾಜ್ನ ಖಾಸಗಿ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿನಿ ತನ್ನ ತಾಯಿಯ ಮೂಲಕ ಈ ಅರ್ಜಿ ಸಲ್ಲಿಸಿದ್ದಳು. 10ನೇ ತರಗತಿ ಉತ್ತೀರ್ಣಳಾಗಿ ಅದೇ ಶಾಲೆಯಲ್ಲಿ 11ನೇ ತರಗತಿಗೆ ಪ್ರವೇಶ ಪಡೆಯಲು ಇಚ್ಛಿಸಿದ್ದ ಆಕೆ, 6ನೇ ತರಗತಿಯಿಂದಲೂ ಹಿಜಾಬ್ ಧರಿಸುತ್ತಿದ್ದೇನೆ ಎಂದೂ, ಇದು ಧಾರ್ಮಿಕವಾಗಿ ಕಡ್ಡಾಯ ಆಚರಣೆ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಿದ್ದಳು.
ನ್ಯಾಯಮೂರ್ತಿಗಳಾದ ಜೆ.ಜೆ. ಮುನೀರ್ ಮತ್ತು ಇಂದ್ರಜಿತ್ ಶುಕ್ಲಾ ಅವರಿದ್ದ ದ್ವಿಸದಸ್ಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ಹಿಜಾಬ್ ಧರಿಸದಿರುವುದರಿಂದ ಧರ್ಮಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಈ ಹಿಂದೆಯೂ ವಿವಿಧ ಹೈಕೋರ್ಟ್ಗಳು ಏಕಾಭಿಪ್ರಾಯದ ತೀರ್ಪುಗಳನ್ನು ನೀಡಿವೆ ಎಂದು ಪೀಠ ಉಲ್ಲೇಖಿಸಿತು. ಶಾಲೆಯ ತರಗತಿಗಳ ಫೋಟೋಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅರ್ಜಿದಾರ ವಿದ್ಯಾರ್ಥಿನಿಯ ಸಮುದಾಯದ ಇತರ ಯಾವುದೇ ವಿದ್ಯಾರ್ಥಿನಿಯರೂ ಹಿಜಾಬ್ ಧರಿಸಿಲ್ಲ, ಆಕೆ ಮಾತ್ರ ಧರಿಸಿದ್ದಾಳೆ ಎಂಬುದನ್ನು ಗಮನಿಸಿತು.
ಸಮವಸ್ತ್ರ ನಿಯಮ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದೂ, ವೈಯಕ್ತಿಕ ಆಯ್ಕೆಯ ಆಧಾರದ ಮೇಲೆ ವಿನಾಯಿತಿ ನೀಡಿದರೆ ಸಮವಸ್ತ್ರ ಪರಿಕಲ್ಪನೆ ಮತ್ತು ಶಾಲಾ ಶಿಸ್ತೇ ಹಾಳಾಗುತ್ತದೆ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು. ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಆವರಣದಲ್ಲಿ ಸಮವಸ್ತ್ರ ಸಂಹಿತೆ ಜಾರಿಗೊಳಿಸುವ ಸಂಪೂರ್ಣ ಸ್ವಾಯತ್ತತೆ ಇದೆ ಎಂದೂ, ಸಮವಸ್ತ್ರ ತಾರತಮ್ಯರಹಿತವಾಗಿ ಸಮಾನತೆ-ಶಿಸ್ತಿಗಾಗಿ ಇರುವವರೆಗೂ ಸಂಸ್ಥೆಯ ನಿರ್ಧಾರವೇ ಅಂತಿಮ ಎಂದೂ ಕೋರ್ಟ್ ಸ್ಪಷ್ಟಪಡಿಸಿತು.
ಶಾಲಾ ಆಡಳಿತ ಮಂಡಳಿ, ರಾಜ್ಯ ಸರ್ಕಾರ ಹಾಗೂ ಸಿಬಿಎಸ್ಇ ಸಹ ವಿದ್ಯಾರ್ಥಿನಿಯ ಅರ್ಜಿಯನ್ನು ವಿರೋಧಿಸಿದ್ದವು. ವಿವಿಧ ಸಮುದಾಯಗಳ ಮಕ್ಕಳು ಕಲಿಯುವ ಶಾಲೆಯಲ್ಲಿ ಒಬ್ಬರಿಗೆ ವಿಶೇಷ ವಿನಾಯಿತಿ ನೀಡಿದರೆ ಶಾಲಾ ಶಿಸ್ತು ಕದಡುತ್ತದೆ ಎಂಬ ಶಾಲೆಯ ವಾದವನ್ನು ನ್ಯಾಯಾಲಯ ಪುರಸ್ಕರಿಸಿತು.



