ಬೆಂಗಳೂರು: ರಾಜಧಾನಿಯ ಲಾಲ್ಬಾಗ್ ಮುಖ್ಯರಸ್ತೆಯಲ್ಲಿದ್ದ ಪ್ರೇಕ್ಷಕರ ನೆಚ್ಚಿನ ಹಾಗೂ ಬೆಂಗಳೂರಿನ ಐಕಾನಿಕ್ ಚಿತ್ರಮಂದಿರವಾಗಿದ್ದ ‘ಊರ್ವಶಿ’ ಥಿಯೇಟರ್ ಇನ್ನು ನೆನಪು ಮಾತ್ರ. ಸುಮಾರು ಎಂಟು ವರ್ಷಗಳಿಂದ ನಡೆಯುತ್ತಿದ್ದ ಗುತ್ತಿಗೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಆದೇಶದ ಬೆನ್ನಲ್ಲೇ ಭೂಮಾಲೀಕರು ಪೊಲೀಸರ ಸಮ್ಮುಖದಲ್ಲಿ ಸ್ಥಳವನ್ನು ವಾಪಸ್ ಪಡೆದಿದ್ದಾರೆ. ಇದೀಗ ಐತಿಹಾಸಿಕ ಚಿತ್ರಮಂದಿರದ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯ ಆರಂಭವಾಗಿದೆ.
1970ರಲ್ಲಿ ವರನಟ ಡಾ. ರಾಜ್ಕುಮಾರ್ ಅವರ ಹಸ್ತದಿಂದ ಉದ್ಘಾಟನೆಗೊಂಡಿದ್ದ ಊರ್ವಶಿ ಚಿತ್ರಮಂದಿರಕ್ಕೆ ಸುಮಾರು 55 ವರ್ಷಗಳ ಸುದೀರ್ಘ ಇತಿಹಾಸವಿದೆ. 1,100 ಆಸನಗಳ ಸಾಮರ್ಥ್ಯ ಹೊಂದಿದ್ದ ಈ ಚಿತ್ರಮಂದಿರದಲ್ಲಿ ಐದು ಭಾಷೆಗಳ 5,000ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಂಡಿವೆ.
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ‘ಎಕೆ 47’ ಸಿನಿಮಾ ಇದೇ ಚಿತ್ರಮಂದಿರದಲ್ಲಿ 100 ದಿನಗಳ ಯಶಸ್ವಿ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತ್ತು. ವಿಶೇಷವಾಗಿ, ಭಾರತದ ಕೇವಲ ಎರಡು ಏಕಪರದೆ ಚಿತ್ರಮಂದಿರಗಳಲ್ಲಿ ಲಭ್ಯವಿದ್ದ ಅತ್ಯಾಧುನಿಕ ಸೌಂಡ್ ಟೆಕ್ನಾಲಜಿಯನ್ನೂ ಊರ್ವಶಿ ಹೊಂದಿತ್ತು.
ಚಿತ್ರಮಂದಿರವನ್ನು ಗುತ್ತಿಗೆಗೆ ಪಡೆದಿದ್ದ ಬಸಟ್ಟಿ ಶೆಟ್ಟಿ ಅವರ ಲೀಸ್ ಅವಧಿ 2018ರ ಏಪ್ರಿಲ್ನಲ್ಲೇ ಮುಕ್ತಾಯಗೊಂಡಿತ್ತು. ಬಳಿಕ ಗುತ್ತಿಗೆ ಮುಂದುವರಿದಿರುವ ಬಗ್ಗೆ ವಿವಾದ ಉಂಟಾಗಿತ್ತು. ಸುಮಾರು ಎಂಟು ವರ್ಷಗಳಿಂದ ನಡೆದ ಕಾನೂನು ಹೋರಾಟದ ಬಳಿಕ ಇದೀಗ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಭೂಮಾಲೀಕರು ಸ್ಥಳವನ್ನು ವಾಪಸ್ ಪಡೆದಿದ್ದಾರೆ.
ಇದೀಗ ಊರ್ವಶಿ ಚಿತ್ರಮಂದಿರದ ಕಟ್ಟಡ ನೆಲಸಮವಾಗುತ್ತಿರುವ ದೃಶ್ಯ ಕಂಡು ಸಿನಿಪ್ರಿಯರು ಭಾವುಕರಾಗಿದ್ದಾರೆ. ಹಲವು ತಲೆಮಾರುಗಳ ಸಿನಿಮಾಸ್ಮೃತಿಗಳನ್ನು ಹೊತ್ತಿದ್ದ ಚಿತ್ರಮಂದಿರ ಕಣ್ಮರೆಯಾಗುತ್ತಿರುವುದು ಕನ್ನಡ ಸಿನಿರಂಗಕ್ಕೂ ದೊಡ್ಡ ನಷ್ಟ ಎಂದೇ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಊರ್ವಶಿ ಚಿತ್ರಮಂದಿರಕ್ಕೆ ಈ ಅಂತ್ಯ ಎದುರಾಗಿದೆ. ಚಿತ್ರಮಂದಿರ ಉಳಿದಿದ್ದರೆ ‘ಟಾಕ್ಸಿಕ್’ ಸಿನಿಮಾವನ್ನು ಇಲ್ಲೇ ಅದ್ದೂರಿಯಾಗಿ ಬಿಡುಗಡೆ ಮಾಡುವ ಸಾಧ್ಯತೆ ಇತ್ತು ಎಂಬ ಮಾತುಗಳೂ ಕೇಳಿಬರುತ್ತಿವೆ.
ಒಟ್ಟಾರೆ, ಬೆಂಗಳೂರಿನ ಸಿನಿಮಾ ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಊರ್ವಶಿ ಚಿತ್ರಮಂದಿರದ 55 ವರ್ಷಗಳ ಸುದೀರ್ಘ ಪಯಣಕ್ಕೆ ಇದೀಗ ತೆರೆ ಬಿದ್ದಂತಾಗಿದೆ.



