ರಾಯಚೂರು: ಮಂತ್ರಾಲಯದಲ್ಲಿ ಗುರು ರಾಯರ 355ನೇ ಆರಾಧನಾ ಮಹೋತ್ಸವ ಆಗಸ್ಟ್ 27ರಿಂದ ಸೆಪ್ಟೆಂಬರ್ 2ರವರೆಗೆ ಏಳು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ ಎಂದು ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಮಂತ್ರಾಲಯದಲ್ಲಿ ಮಾತನಾಡಿದ ಅವರು, ಆರಾಧನಾ ಮಹೋತ್ಸವಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಆಗಸ್ಟ್ 29, 30 ಮತ್ತು 31ರಂದು ಪರಿಮಳ ತೀರ್ಥ ಪುಷ್ಕರಣಿಯಲ್ಲಿ ರಾತ್ರಿ ವೇಳೆ ಮೂರು ದಿನಗಳ ಕಾಲ ತೆಪ್ಪೋತ್ಸವ ನಡೆಯಲಿದೆ. ಆಗಸ್ಟ್ 29ರಂದು ರಾಯರ ಪೂರ್ವಾರಾಧನೆ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಸಂಜೆ ಸಾಧಕರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಆಗಸ್ಟ್ 30ರಂದು ರಾಯರ ಮಧ್ಯಾರಾಧನೆ ಹಿನ್ನೆಲೆಯಲ್ಲಿ ಸುವರ್ಣ ರಥೋತ್ಸವ ನಡೆಯಲಿದೆ. ಆಗಸ್ಟ್ 31ರಂದು ರಾಯರ ಉತ್ತರಾರಾಧನೆ ಅಂಗವಾಗಿ ರಾಜಬೀದಿಯಲ್ಲಿ ಅದ್ಧೂರಿ ಮಹಾರಥೋತ್ಸವ ಜರುಗಲಿದೆ. ಈ ವೇಳೆ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪವೃಷ್ಟಿ ಮಾಡಲಾಗುವುದು ಎಂದು ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಭಕ್ತರ ಪುಣ್ಯ ಸ್ನಾನಕ್ಕಾಗಿ ಶವರ್ ವ್ಯವಸ್ಥೆ ಕಲ್ಪಿಸಲಾಗುವುದು. ಇದರ ಜೊತೆಗೆ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಹಾಗೂ ವಾಹನಗಳ ಪಾರ್ಕಿಂಗ್ಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತರು ಹಾಗೂ ದಾನಿಗಳ ನೆರವಿನಿಂದ ನಿರ್ಮಾಣವಾಗಿರುವ ಥೀಮ್ ಪಾರ್ಕ್, ಮುಖ್ಯರಸ್ತೆಯ ಕಾರಿಡಾರ್ ಹಾಗೂ ಎಸ್ಟಿಪಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
ಆರಾಧನಾ ಮಹೋತ್ಸವಕ್ಕೆ ದೇಶದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮೂಲಸೌಕರ್ಯ ಹಾಗೂ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.



