ಮೈಸೂರು: ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ಭೂಸ್ವಾಧೀನ ವಿವಾದದ ಬೆನ್ನಲ್ಲೇ, ಮೈಸೂರು ಜಿಲ್ಲೆಯಲ್ಲೂ ರೈತರ ಫಲವತ್ತಾದ ಕೃಷಿ ಭೂಮಿಗೆ ರಾಜ್ಯ ಸರ್ಕಾರ ಕೈಹಾಕಿದೆ ಎಂಬ ಆರೋಪ ಕೇಳಿಬಂದಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಬರೋಬ್ಬರಿ 165 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಸ್ಥಳೀಯ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮೈಸೂರು ವಿಮಾನ ನಿಲ್ದಾಣದ ಸಮೀಪವಿರುವ ವರುಣಾ ಕ್ಷೇತ್ರದ ಮರಸೆ ಹಾಗೂ ಮದರಗಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಈ 165 ಎಕರೆ ಭೂಮಿ ಗುರುತಿಸಲಾಗಿದೆ. ಈ ಜಮೀನುಗಳಲ್ಲಿ ರೈತರು ಅಡಕೆ, ಬಾಳೆ, ತೆಂಗು, ಭತ್ತ ಸೇರಿದಂತೆ ವಾಣಿಜ್ಯ ಮತ್ತು ಆಹಾರ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ.
ಸಮೃದ್ಧವಾಗಿ ಬೆಳೆ ತೆಗೆಯುತ್ತಿರುವ ಭೂಮಿಯನ್ನೇ ಕೈಗಾರಿಕೆ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ಅನ್ನದಾತರ ಆತಂಕವನ್ನು ಹೆಚ್ಚಿಸಿದೆ. ಜೀವನಕ್ಕೆ ಆಧಾರವಾಗಿರುವ ಫಲವತ್ತಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕೆಗೆ ಬಿಟ್ಟುಕೊಡುವುದಿಲ್ಲ ಎಂದು ಸ್ಥಳೀಯ ರೈತರು ಪಟ್ಟುಹಿಡಿದಿದ್ದಾರೆ.
ಬೆಂಗಳೂರು ಸಮೀಪದ ಬಿಡದಿಯಲ್ಲಿ ನಡೆದ ಭೂಸ್ವಾಧೀನ ವಿರೋಧಿ ಚಳವಳಿಯ ಮಾದರಿಯಲ್ಲೇ ಮೈಸೂರಿನಲ್ಲೂ ಬೃಹತ್ ಹೋರಾಟ ರೂಪಿಸಲು ರೈತ ಸಂಘಟನೆಗಳು ಮತ್ತು ಭೂಮಾಲೀಕರು ಸಜ್ಜಾಗುತ್ತಿದ್ದಾರೆ.



