HomeKarnataka Newsಖಾಸಗಿ ಕೃಷಿ ಜಮೀನಲ್ಲೂ ಅಪಘಾತವಾದ್ರೆ ವಿಮಾ ಕಂಪನಿ ಪರಿಹಾರ ಕೊಡಲೇಬೇಕು: ಹೈಕೋರ್ಟ್ ಮಹತ್ವದ ತೀರ್ಪು

ಖಾಸಗಿ ಕೃಷಿ ಜಮೀನಲ್ಲೂ ಅಪಘಾತವಾದ್ರೆ ವಿಮಾ ಕಂಪನಿ ಪರಿಹಾರ ಕೊಡಲೇಬೇಕು: ಹೈಕೋರ್ಟ್ ಮಹತ್ವದ ತೀರ್ಪು

For Dai;y Updates Join Our whatsapp Group

ಬೆಂಗಳೂರು: ಸಾರ್ವಜನಿಕರಿಗೆ ಪ್ರವೇಶಾವಕಾಶವಿರುವ ಖಾಸಗಿ ಕೃಷಿ ಜಮೀನನ್ನು ಕೂಡ ಮೋಟಾರು ವಾಹನ ಕಾಯ್ದೆಯಡಿ ‘ಸಾರ್ವಜನಿಕ ಸ್ಥಳ’ ಎಂದು ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಖಾಸಗಿ ಜಮೀನಿನಲ್ಲಿ ಅಪಘಾತ ಸಂಭವಿಸಿದೆ ಎಂಬ ಕಾರಣಕ್ಕೆ ವಿಮಾ ಕಂಪನಿ ಪರಿಹಾರ ನೀಡುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಬಳಿಯ ತಲಕಾಯಲ ಬೆಟ್ಟದಲ್ಲಿ 2019ರ ನವೆಂಬರ್‌ 28ರಂದು ಸಂಭವಿಸಿದ್ದ ಅಪಘಾತಕ್ಕೆ ಸಂಬಂಧಿಸಿದಂತೆ ಮೃತ ಕೃಷ್ಣಪ್ಪ ಅವರ ಪತ್ನಿ ರಾಮಕ್ಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 2(34)ರ ಅನ್ವಯ ಸಾರ್ವಜನಿಕರಿಗೆ ಪ್ರವೇಶವಿರುವ ಖಾಸಗಿ ಜಮೀನು ಕೂಡ ‘ಸಾರ್ವಜನಿಕ ಸ್ಥಳ’ದ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಪೀಠ ಹೇಳಿದೆ. ಕೃಷಿ ಜಮೀನಿಗೆ ಸಾರ್ವಜನಿಕರು ಹಾಗೂ ಕಾರ್ಮಿಕರು ಕೆಲಸದ ನಿಮಿತ್ತ ಪ್ರವೇಶಿಸಬಹುದಾದ್ದರಿಂದ, ಅಲ್ಲಿ ಸಂಭವಿಸಿದ ಅಪಘಾತಕ್ಕೂ ವಿಮಾ ಕಂಪನಿ ಪರಿಹಾರ ನೀಡುವ ಹೊಣೆಗಾರಿಕೆ ಹೊಂದಿರುತ್ತದೆ ಎಂದು ತಿಳಿಸಿದೆ.

ಈ ಹಿಂದೆ ಖಾಸಗಿ ಜಮೀನಿನಲ್ಲಿ ಅಪಘಾತ ಸಂಭವಿಸಿದೆ ಹಾಗೂ ವಾಹನಕ್ಕೆ ಕೇವಲ ‘ಆಕ್ಟ್ ಪಾಲಿಸಿ’ ಇದೆ ಎಂಬ ಕಾರಣ ನೀಡಿ ವಿಮಾ ಕಂಪನಿಯನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಿದ್ದ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ವಿಮಾ ಕಂಪನಿಗೆ ಪರಿಹಾರ ಪಾವತಿಸುವಂತೆ ಸೂಚನೆ

ಅಪಘಾತಕ್ಕೆ ಕಾರಣವಾದ ವಾಹನವು ‘ಪ್ಯಾಕೇಜ್ ಪಾಲಿಸಿ’ ಹೊಂದಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ನ್ಯಾಯಪೀಠ ಗಮನಿಸಿದೆ. ಹೀಗಾಗಿ ಮೂರನೇ ವ್ಯಕ್ತಿಯ ಜೀವಹಾನಿಗೆ ವಿಮಾ ಕಂಪನಿಯೇ ಪರಿಹಾರ ನೀಡಬೇಕು ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿಗೆ ಮೃತ ಕೃಷ್ಣಪ್ಪ ಅವರ ಪತ್ನಿ ರಾಮಕ್ಕ ಅವರಿಗೆ ಹೆಚ್ಚುವರಿಯಾಗಿ 4,55,052 ರೂ. ಪರಿಹಾರವನ್ನು ಶೇ.6ರ ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿಸಿದೆ.

ಈ ಹಿಂದೆ ನ್ಯಾಯಮಂಡಳಿ 14,35,000 ರೂ. ಪರಿಹಾರ ನಿಗದಿಪಡಿಸಿತ್ತು. ಇದೀಗ ಹೆಚ್ಚುವರಿ 4,55,052 ರೂ. ಸೇರಿಸಿ ಒಟ್ಟು ಪರಿಹಾರ ಮೊತ್ತವನ್ನು 18,90,052 ರೂ.ಗೆ ಹೆಚ್ಚಿಸಲಾಗಿದೆ. ಈ ಮೊತ್ತವನ್ನು ಶೇ.6ರ ಬಡ್ಡಿಯೊಂದಿಗೆ ಆರು ವಾರಗಳೊಳಗೆ ನ್ಯಾಯಮಂಡಳಿಯಲ್ಲಿ ಠೇವಣಿ ಇಡುವಂತೆ ವಿಮಾ ಕಂಪನಿಗೆ ಸೂಚಿಸಲಾಗಿದೆ. ಹೆಚ್ಚುವರಿ ಪರಿಹಾರದ ಸಂಪೂರ್ಣ ಮೊತ್ತವನ್ನು ಮೃತರ ಪತ್ನಿ ರಾಮಕ್ಕ ಅವರಿಗೆ ಬಿಡುಗಡೆ ಮಾಡುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ.

ಅಪಘಾತ ನಡೆದಿದ್ದು ಹೇಗೆ?

2019ರ ನವೆಂಬರ್‌ 28ರಂದು ಕೃಷ್ಣಪ್ಪ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಬಳಿಯ ಚಂದ್ರಪ್ಪ ಅವರ ಜಮೀನಿನಲ್ಲಿ ಮರ ಕಡಿಯುವ ಕೆಲಸಕ್ಕೆ ತೆರಳಿದ್ದರು. ಕೆಲಸದ ವೇಳೆ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದಾಗ, ಕತ್ತರಿಸಿದ್ದ ಮರದ ದಿಮ್ಮಿಗಳನ್ನು ತುಂಬಲು ಬಂದಿದ್ದ ಚಾಲಕ ವಾಹನ ಚಲಾಯಿಸುವ ಸಂದರ್ಭದಲ್ಲಿ ಕೃಷ್ಣಪ್ಪ ಅವರಿಗೆ ಡಿಕ್ಕಿ ಹೊಡೆದಿದ್ದ.

ಗಂಭೀರವಾಗಿ ಗಾಯಗೊಂಡ ಕೃಷ್ಣಪ್ಪ ಮೃತಪಟ್ಟಿದ್ದರು. ಬಳಿಕ ಅವರ ಪತ್ನಿ ರಾಮಕ್ಕ ಪರಿಹಾರ ಕೋರಿ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಆದರೆ, ಅಪಘಾತ ಖಾಸಗಿ ಜಮೀನಿನಲ್ಲಿ ಸಂಭವಿಸಿದೆ ಮತ್ತು ವಾಹನಕ್ಕೆ ‘ಆಕ್ಟ್ ಪಾಲಿಸಿ’ ಮಾತ್ರ ಇದೆ ಎಂದು ಪರಿಗಣಿಸಿದ್ದ ನ್ಯಾಯಮಂಡಳಿ ವಿಮಾ ಕಂಪನಿಯನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಮಕ್ಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ವಿಮಾ ಕಂಪನಿಯೇ ಪರಿಹಾರ ಪಾವತಿಸಬೇಕು ಎಂದು ಸ್ಪಷ್ಟಪಡಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img