ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಇತ್ತೀಚೆಗೆ ಇನ್ಫ್ಲೂಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದ್ದು, ಗದಗ ಜಿಲ್ಲೆಯಲ್ಲಿ ಮಾತ್ರ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜನವರಿ-2026ರಿಂದ ಇದುವರೆಗೆ ಜಿಲ್ಲೆಯಲ್ಲಿ 10 ಪ್ರಯೋಗಾಲಯ ದೃಢೀಕೃತ ಇನ್ಫ್ಲೂಯೆಂಜಾ ಪ್ರಕರಣಗಳು ವರದಿಯಾಗಿದ್ದು, ಎಲ್ಲ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ಇನ್ಫ್ಲೂಯೆಂಜಾ ಹಾಗೂ ಉಸಿರಾಟದ ತೊಂದರೆ ಇರುವ ಪ್ರಕರಣಗಳ ಮೇಲೆ ಆರೋಗ್ಯ ಇಲಾಖೆ ನಿರಂತರ ಕಣ್ಗಾವಲು ವಹಿಸಿದೆ. ಅಗತ್ಯವಿರುವ ಪ್ರಕರಣಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸಾ ವ್ಯವಸ್ಥೆ ಲಭ್ಯವಿದ್ದು, ಜಿಲ್ಲೆಯ ಪರಿಸ್ಥಿತಿಯ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.
ಮಳೆಗಾಲ ಹಾಗೂ ಹವಾಮಾನ ಬದಲಾವಣೆಯ ಅವಧಿಯಲ್ಲಿ ಉಸಿರಾಟ ಸಂಬಂಧಿ ತೊಂದರೆಗಳು ಸಾಮಾನ್ಯವಾಗಿ ಹೆಚ್ಚಾಗುತ್ತವೆ. ಮಳೆಯಿಂದ ತಪ್ಪಿಸಿಕೊಳ್ಳಲು ಜನರು ಮನೆ, ಕಚೇರಿ, ಬಸ್ ಹಾಗೂ ಕಾಯುವ ಕೊಠಡಿಗಳಂತಹ ಗಾಳಿ ಸಂಚಾರ ಕಡಿಮೆ ಇರುವ ಒಳಾಂಗಣ ಪ್ರದೇಶಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಸೋಂಕಿತ ವ್ಯಕ್ತಿಯ ಕೆಮ್ಮು ಮತ್ತು ಸೀನುವಿಕೆಯಿಂದ ಹೊರಬರುವ ಹನಿಗಳ ಮೂಲಕ ಸೋಂಕು ಇತರರಿಗೆ ತಗುಲುವ ಸಾಧ್ಯತೆ ಇರುತ್ತದೆ.
ಇನ್ಫ್ಲೂಯೆಂಜಾ ಹೊಸ ಕಾಯಿಲೆಯಲ್ಲ. ಹೆಚ್ಚಿನ ಜನರಲ್ಲಿ ಇದು ಸೌಮ್ಯದಿಂದ ಮಧ್ಯಮ ಪ್ರಮಾಣದಲ್ಲಿ ಕಂಡುಬರುವ ಕಾಯಿಲೆಯಾಗಿದ್ದು, ಸೂಕ್ತ ವಿಶ್ರಾಂತಿ ಹಾಗೂ ವೈದ್ಯಕೀಯ ಸಲಹೆ ಪಡೆದಲ್ಲಿ ಚೇತರಿಸಿಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜ್ವರ, ಕೆಮ್ಮು, ಮೂಗು ಕಟ್ಟಿಕೊಳ್ಳುವುದು, ಗಂಟಲು ನೋವು, ತಲೆನೋವು, ಮೈ-ಕೈ ನೋವು, ಸುಸ್ತು, ದೌರ್ಬಲ್ಯ, ಉಸಿರಾಟದ ತೊಂದರೆ ಹಾಗೂ ಎದೆನೋವು ಸೇರಿದಂತೆ ಹಲವು ಲಕ್ಷಣಗಳು ಕಂಡುಬರಬಹುದು. ಮಕ್ಕಳು, ವಯೋವೃದ್ಧರು, ಗರ್ಭಿಣಿಯರು ಹಾಗೂ ಮಧುಮೇಹ, ಹೃದಯ ಮತ್ತು ಶ್ವಾಸಕೋಶ ಸೇರಿದಂತೆ ದೀರ್ಘಕಾಲಿನ ಕಾಯಿಲೆ ಹೊಂದಿರುವವರು ಜ್ವರ ಮತ್ತು ಉಸಿರಾಟದ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಎಂದು ಸೂಚಿಸಲಾಗಿದೆ.
ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಟಿಶ್ಯು, ಕರವಸ್ತ್ರ ಅಥವಾ ಮೊಣಕೈಯಿಂದ ಮುಚ್ಚಿಕೊಳ್ಳಬೇಕು. ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯಬೇಕು. ಜ್ವರ ಮತ್ತು ಕೆಮ್ಮು ಇದ್ದಾಗ ಶಾಲೆ, ಕಚೇರಿ ಹಾಗೂ ಜನಸಂದಣಿ ಇರುವ ಸ್ಥಳಗಳಿಗೆ ತೆರಳುವುದನ್ನು ತಪ್ಪಿಸಬೇಕು.
ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಸ್ವಚ್ಛವಲ್ಲದ ಕೈಗಳಿಂದ ಕಣ್ಣು, ಮೂಗು ಹಾಗೂ ಬಾಯಿಯನ್ನು ಮುಟ್ಟದಿರುವುದು ಅಗತ್ಯವಾಗಿದೆ. ಸಾಕಷ್ಟು ದ್ರವ ಹಾಗೂ ಪೌಷ್ಟಿಕ ಆಹಾರ ಸೇವಿಸುವುದರ ಜತೆಗೆ ಸಮರ್ಪಕ ವಿಶ್ರಾಂತಿ ಪಡೆಯಬೇಕು. ವೈದ್ಯರ ಸಲಹೆ ಇಲ್ಲದೆ ಆ್ಯಂಟಿಬಯೋಟಿಕ್ ಅಥವಾ ಇತರೆ ಔಷಧಿಗಳನ್ನು ಸೇವಿಸಬಾರದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.
ಗದಗ ಜಿಲ್ಲೆಯಲ್ಲಿ ಇನ್ಫ್ಲೂಯೆಂಜಾ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಅನಗತ್ಯ ಆತಂಕಕ್ಕೆ ಒಳಗಾಗಬಾರದು. ಆದರೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆ ಕಂಡುಬಂದಲ್ಲಿ ನಿರ್ಲಕ್ಷಿಸದೆ ಸಮೀಪದ ಸರ್ಕಾರಿ ಆರೋಗ್ಯ ಸಂಸ್ಥೆಯನ್ನು ಸಂಪರ್ಕಿಸಿ ವೈದ್ಯಕೀಯ ಸಲಹೆ ಪಡೆಯಬೇಕು.
– ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗದಗ



