ವಿಜಯಸಾಕ್ಷಿ ಸುದ್ದಿ, ಧಾರವಾಡ: ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವ ನಿಟ್ಟಿನಲ್ಲಿ ಅರ್ಹ ಆಸ್ಪತ್ರೆಗಳು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ನೋಂದಣಿಯಾಗಿ ಯೋಜನೆಯೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.
ಜಿಲ್ಲಾಧಿಕಾರಿ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ 24 ಆಸ್ಪತ್ರೆಗಳು ಎಬಿ-ಆರ್‌ಕೆ ಯೋಜನೆಯಡಿ ನೋಂದಣಿಯಾಗಿದ್ದು, ಅವುಗಳಲ್ಲಿ 20 ಆಸ್ಪತ್ರೆಗಳು ಆರೋಗ್ಯ ಸಂಜೀವಿನಿ ಯೋಜನೆಯಲ್ಲಿಯೂ ಸೇರ್ಪಡೆಯಾಗಿವೆ. ಉಳಿದ ಆಸ್ಪತ್ರೆಗಳ ಜತೆಗೆ ಅರ್ಹತೆ ಹೊಂದಿರುವ ಇತರೆ ಆಸ್ಪತ್ರೆಗಳೂ ಯೋಜನೆಗೆ ಸೇರಬೇಕು ಎಂದು ಹೇಳಿದರು.
ಹಿಂದೆ ನಿಗದಿತ ದರ ಹಾಗೂ ಪಾವತಿ ಪ್ರಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಆಸ್ಪತ್ರೆಗಳು ಯೋಜನೆಗೆ ನೋಂದಣಿಯಾಗಲು ಹಿಂದೇಟು ಹಾಕುತ್ತಿದ್ದವು. ಇದೀಗ ಪಾವತಿ ಪ್ರಕ್ರಿಯೆ ಸುಧಾರಿಸಲಾಗಿದ್ದು, ಸಿಜಿಎಚ್‌ಎಸ್ ದರಗಳಿಗೆ ಅನುಗುಣವಾಗಿ ಚಿಕಿತ್ಸಾ ದರ ನಿಗದಿಪಡಿಸಿರುವುದರಿಂದ ಹೆಚ್ಚಿನ ಆಸ್ಪತ್ರೆಗಳು ಯೋಜನೆಯಡಿ ನೋಂದಣಿಯಾಗುವ ನಿರೀಕ್ಷೆಯಿದೆ ಎಂದರು.
ಧಾರವಾಡ ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರಿದ್ದು, ನೆರೆಯ ಜಿಲ್ಲೆಗಳ ನೌಕರರೂ ಚಿಕಿತ್ಸೆಗೆ ಇಲ್ಲಿನ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಯೋಜನೆಯಡಿ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಆಸ್ಪತ್ರೆಗಳು ಮುಂದಾಗಬೇಕು ಎಂದು ಮನವಿ ಮಾಡಿದರು.
ಹುಬ್ಬಳ್ಳಿ ಐಎಂಎ ಪ್ರತಿನಿಧಿ ಡಾ. ಬಸವರಾಜ ಸರ್ಜನ ಮಾತನಾಡಿ, ಆರೋಗ್ಯ ಸಂಜೀವಿನಿ ಯೋಜನೆಯಡಿ ಪರಿಷ್ಕೃತ ಚಿಕಿತ್ಸಾ ದರ ಹಾಗೂ ಸುಧಾರಿತ ಮರುಪಾವತಿ ವ್ಯವಸ್ಥೆ ಜಾರಿಯಾಗಿರುವುದರಿಂದ ಹೆಚ್ಚಿನ ನರ್ಸಿಂಗ್ ಹೋಮ್ ಮತ್ತು ವೈದ್ಯಕೀಯ ಸಂಸ್ಥೆಗಳನ್ನು ನೋಂದಣಿಗೆ ಒಳಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಕಾರ್ಯಾಗಾರದಲ್ಲಿ ಆರೋಗ್ಯ ಸಂಜೀವಿನಿ ಯೋಜನೆಯ ನೋಡಲ್ ಅಧಿಕಾರಿ ಡಾ. ಶಶಿಧರ ಕಳಸನೂರಮಠ ಯೋಜನೆಯ ಪ್ರಮುಖ ಅಂಶಗಳ ಕುರಿತು ವಿವರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ. ಮಾತನಾಡಿದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಸೊಲಗಿ ನಿರೂಪಿಸಿದರು. ರಮೇಶ ಲಿಂಗದಾಳ ವಂದಿಸಿದರು.
ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಉತ್ತಮ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು. ಈ ನಿಟ್ಟಿನಲ್ಲಿ ಅರ್ಹ ಆಸ್ಪತ್ರೆಗಳು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯೊಂದಿಗೆ ಕೈಜೋಡಿಸಬೇಕು.
— ಸ್ನೇಹಲ್ ಆರ್., ಜಿಲ್ಲಾಧಿಕಾರಿ, ಧಾರವಾಡ



