ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ನಾಗಾವಿ-ತಾಂಡಾದಲ್ಲಿ ಶ್ರೀ ನಾಗದೇವತೆಯ 26ನೇ ವರ್ಷದ ಜಾತ್ರಾಮಹೋತ್ಸವವು ಆ.29ರಂದು ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಜರುಗಲಿದೆ.
ಶ್ರೀ ಛತ್ರಪ್ಪ ವಾಗಪ್ಪ ರಾಠೋಡ ಅವರ ತೋಟದಲ್ಲಿರುವ ಶ್ರೀ ನಾಗದೇವತೆಯ ಸನ್ನಿಧಿಯಲ್ಲಿ ಜಾತ್ರಾಮಹೋತ್ಸವವನ್ನು ಆಯೋಜಿಸಲಾಗಿದೆ. ಜಾತ್ರೆಯ ಅಂಗವಾಗಿ ರುದ್ರಾಭಿಷೇಕ, 108 ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಕುಂಭಮೇಳ, ಧರ್ಮ ಚಿಂತನಗೋಷ್ಠಿ, ಸನ್ಮಾನ ಸಮಾರಂಭ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಭಕ್ತಿಭಾವದಿಂದ ರಥೋತ್ಸವ ಜರುಗಲಿದ್ದು, ಡೊಳ್ಳು, ಭಜನಾ ಮಂಡಳಿಗಳು, ಜಾಂಜ್ ಮೇಳ ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳು ಜಾತ್ರೆಯ ಮೆರುಗು ಹೆಚ್ಚಿಸಲಿವೆ. ರಾತ್ರಿ ಡ್ಯಾನ್ಸ್ ಸ್ಪರ್ಧೆ ಹಾಗೂ ನೃತ್ಯ ಕಾರ್ಯಕ್ರಮವೂ ನಡೆಯಲಿದೆ.
ಇದಕ್ಕೂ ಮುನ್ನ ಆ.28ರಂದು ಸಂಜೆ ವಿವಿಧ ಬಂಜಾರ ಭಜನಾ ತಂಡಗಳು ಹಾಗೂ ಗಾಯಕರಿಂದ ಭಜನಾ ಜಾಗರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಆ.29ರಂದು ನಡೆಯುವ ಧರ್ಮ ಚಿಂತನಗೋಷ್ಠಿಯಲ್ಲಿ ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು, ಹರ್ಲಾಪೂರ-ಹಳ್ಳಿಗುಡಿಯ ಡಾ. ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಕೇಸರಟ್ಟಿಯ ಬಾಲತಪಸ್ವಿ ಸೋಮಲಿಂಗ ಸ್ವಾಮಿಗಳು ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
ಗ್ರಾಮೀಣ ಸಂಸ್ಕೃತಿ, ಪರಂಪರೆ, ಭಕ್ತಿ ಹಾಗೂ ಸಹೋದರತ್ವವನ್ನು ಬೆಸೆಯುವ ಈ ಜಾತ್ರಾಮಹೋತ್ಸವದಲ್ಲಿ ನಾಡಿನ ಭಕ್ತರು, ಬಂಧು-ಬಳಗ ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ ನಾಗದೇವತೆ ವಿವಿಧೋದ್ದೇಶಗಳ ಸೇವಾ ಟ್ರಸ್ಟ್ ಹಾಗೂ ಜಾತ್ರಾ ಸಮಿತಿ ಮನವಿ ಮಾಡಿದೆ.



