ವಿಜಯಸಾಕ್ಷಿ ಸುದ್ದಿ, ಧಾರವಾಡ: ಬೆಳೆ ಸಮೀಕ್ಷೆ ಹಾಗೂ ಬೆಳೆ ವಿಮೆ ಅರ್ಜಿಯಲ್ಲಿನ ಮಾಹಿತಿ ಹೊಂದಿಕೆಯಾಗದಿದ್ದರೆ ವಿಮೆ ಪರಿಹಾರ ತಿರಸ್ಕೃತಗೊಳ್ಳುವ ಸಾಧ್ಯತೆ ಇರುವುದರಿಂದ ರೈತರು ತಮ್ಮ ಪಹಣಿ ಪತ್ರಿಕೆಯಲ್ಲಿ ಬೆಳೆದಿರುವ ನಿಖರ ಬೆಳೆ ವಿವರಗಳನ್ನು ದಾಖಲಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ಆ. ೨೩ರೊಳಗೆ ಬೆಳೆಗಳ ಮರುಸಮೀಕ್ಷೆ ನಡೆಯಲಿದ್ದು, ಆ. ೨೫ರೊಳಗೆ ಮೇಲ್ವಿಚಾರಕರ ಪರಿಶೀಲನೆ ಪೂರ್ಣಗೊಳ್ಳಲಿದೆ. ಸಮೀಕ್ಷೆ ನಡೆಯದ ತಾಕುಗಳಿಗೆ ಮಾತ್ರ ಆ. ೨೮ರೊಳಗೆ ರೈತರು ಆಕ್ಷೇಪಣೆ ಸಲ್ಲಿಸಬಹುದು. ಆ. ೩೧ರೊಳಗೆ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲಾಗುವುದು. ನಂತರ ಯಾವುದೇ ವಿಸ್ತರಣೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.
ರೈತರು ತಮ್ಮ ಸರ್ವೇ ಸಂಖ್ಯೆಗೆ ಬೆಳೆ ಸಮೀಕ್ಷೆ ದಾಖಲಾಗಿದೆಯೇ ಎಂಬುದನ್ನು ‘ಬೆಳೆ ದರ್ಶಕ’ ಆ್ಯಪ್ನಲ್ಲಿ ಪರಿಶೀಲಿಸಬಹುದು. ಬೆಳೆ ವಿವರ ಅಥವಾ ಛಾಯಾಚಿತ್ರಗಳಲ್ಲಿ ತಪ್ಪಿದ್ದರೆ ಅದೇ ಆ್ಯಪ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಸರ್ಕಾರದ ವಿವಿಧ ಸವಲತ್ತು, ಬರ ಪರಿಹಾರ ಹಾಗೂ ಸಹಾಯಧನ ಪಡೆಯಲು ಪ್ರತಿಯೊಂದು ಸರ್ವೇ ಸಂಖ್ಯೆಯನ್ನು ಎಫ್ಐಡಿ ಮೂಲಕ ನೋಂದಾಯಿಸಿ ರೈತರ ಗುರುತಿನ ಸಂಖ್ಯೆ ಪಡೆಯುವುದು ಕಡ್ಡಾಯವಾಗಿದೆ. ಆಧಾರ್ ಪ್ರತಿ, ಸಂಪರ್ಕಿತ ಮೊಬೈಲ್ ಸಂಖ್ಯೆ, ಪಹಣಿ, ಬ್ಯಾಂಕ್ ಪಾಸ್ಬುಕ್, ಭಾವಚಿತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಒನ್, ಕರ್ನಾಟಕ ಒನ್, ಸಾಮಾನ್ಯ ಸೇವಾ ಕೇಂದ್ರ, ರೈತ ಸಂಪರ್ಕ ಕೇಂದ್ರ ಅಥವಾ ಸಂಬಂಧಿಸಿದ ಇಲಾಖೆಗಳ ಕಚೇರಿಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.



