ಚಾಮರಾಜನಗರ: ಕಾವೇರಿ ವನ್ಯಧಾಮ ಎನ್ಕೌಂಟರ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮ್ಯಾಜಿಸ್ಟ್ರೇಟ್ ತನಿಖಾ ವರದಿ ಸಲ್ಲಿಕೆಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿದ್ದು, ನಾಲ್ಕು ಪ್ರತ್ಯೇಕ ತಂಡಗಳು ತನಿಖೆಗಿಳಿದಿವೆ.
ಸಿಐಡಿ ತನಿಖೆಗೆ ಇಬ್ಬರು ಡಿವೈಎಸ್ಪಿಗಳು ಹಾಗೂ ಇಬ್ಬರು ಇನ್ಸ್ಪೆಕ್ಟರ್ಗಳನ್ನು ನಿಯೋಜಿಸಲಾಗಿದೆ. ಡಿವೈಎಸ್ಪಿ ಸತೀಶ್ ಚಿಟಗುಬ್ಬಿ, ಡಿವೈಎಸ್ಪಿ ಡಿ.ಎಸ್. ರಾಜೇಂದ್ರ, ಇನ್ಸ್ಪೆಕ್ಟರ್ ಕೆ.ಪಿ. ಗೋಪಾಲ್ ಹಾಗೂ ಇನ್ಸ್ಪೆಕ್ಟರ್ ಹೆಚ್.ಎನ್. ಹೊನ್ನಪ್ಪ ಅವರ ನೇತೃತ್ವದಲ್ಲಿ ತಂಡಗಳು ಕಾರ್ಯನಿರ್ವಹಿಸುತ್ತಿವೆ.
ಈಗಾಗಲೇ ಸಿಐಡಿ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಬೀಡುಬಿಟ್ಟು ತನಿಖೆ ಆರಂಭಿಸಿದ್ದಾರೆ. ಸ್ಥಳೀಯ ಪೊಲೀಸರು ಇದುವರೆಗೆ ನಡೆಸಿದ ತನಿಖೆಗೆ ಸಂಬಂಧಿಸಿದ ಕೇಸ್ ಫೈಲ್ಗಳು ಹಾಗೂ ದಾಖಲೆಗಳನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ.
ಎನ್ಕೌಂಟರ್ ಪ್ರಕರಣ ಮಾತ್ರವಲ್ಲದೆ, ಹನೂರು, ರಾಮಾಪುರ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನೂ ಸಿಐಡಿ ತನಿಖೆ ನಡೆಸಲಿದೆ. ಒಟ್ಟು ನಾಲ್ಕು ಪ್ರಕರಣಗಳು ಸಿಐಡಿ ತನಿಖೆಯ ವ್ಯಾಪ್ತಿಗೆ ಬಂದಿವೆ.
ಪ್ರಕರಣದ ವಿವಿಧ ಆಯಾಮಗಳನ್ನು ಪರಿಶೀಲಿಸಲು ಸಿಐಡಿ ತಂಡಗಳು ಸ್ಥಳೀಯ ದಾಖಲೆಗಳು, ಪ್ರಕರಣದ ಹಿನ್ನೆಲೆ ಹಾಗೂ ಘಟನಾ ಸ್ಥಳದ ಮಾಹಿತಿಯನ್ನು ಕಲೆಹಾಕುತ್ತಿವೆ. ಮ್ಯಾಜಿಸ್ಟ್ರೇಟ್ ತನಿಖೆಯ ಬಳಿಕ ಇದೀಗ ಸಿಐಡಿ ತನಿಖೆ ಆರಂಭವಾಗಿರುವುದರಿಂದ ಪ್ರಕರಣದ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.



