ಗದಗ: ರಾಜ್ಯ ಸರ್ಕಾರ ಆಡಳಿತಾತ್ಮಕ ಮಟ್ಟದಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಬೀದರ್ ನಗರ ಪಾಲಿಕೆ ಆಯುಕ್ತರಾಗಿದ್ದ ಮುಕುಲ್ ಜೈನ್, ಐಎಎಸ್ ಅವರನ್ನು ಗದಗ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ವರ್ಗಾವಣೆ ಮಾಡಿ ನೇಮಕ ಮಾಡಲಾಗಿದೆ.
ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ. ಈ ಆದೇಶದಲ್ಲಿ ಐಎಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳಿಗೆ ವಿವಿಧ ಹುದ್ದೆಗಳಿಗೆ ವರ್ಗಾವಣೆ ಮತ್ತು ನೇಮಕಾತಿ ಮಾಡಲಾಗಿದೆ.
2022ನೇ ಬ್ಯಾಚ್ನ ಐಎಎಸ್ ಅಧಿಕಾರಿ ಮುಕುಲ್ ಜೈನ್ ಅವರು ಇದುವರೆಗೆ ಬೀದರ್ ನಗರ ಪಾಲಿಕೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಗದಗ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಗದಗ ಜಿಲ್ಲಾ ಪಂಚಾಯತಿಯ ಸಿಇಒ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ನಿರ್ವಹಿಸುತ್ತಿದ್ದ ಸಿ.ಎನ್. ಶ್ರೀಧರ, ಐಎಎಸ್ ಅವರನ್ನು ಈ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗಿದೆ. ನೂತನ ಸಿಇಒ ಆಗಿ ಮುಕುಲ್ ಜೈನ್ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಪಂಚಾಯತಿಗೆ ಪೂರ್ಣಾವಧಿಯ ಆಡಳಿತಾತ್ಮಕ ಸಾರಥಿ ದೊರೆತಂತಾಗಿದೆ.
ಈ ವರ್ಗಾವಣೆ ಆದೇಶದೊಂದಿಗೆ ಗದಗ ಜಿಲ್ಲೆಯ ಆಡಳಿತ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆಯಾಗಿದ್ದು, ಮುಕುಲ್ ಜೈನ್ ಅವರು ನೂತನ ಜಿಪಂ ಸಿಇಒ ಆಗಿ ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ.



