ಗದಗ: ನನ್ನ ರಾಜೀನಾಮೆ ಪಡೆಯುವ ಸಲುವಾಗಿ ಸ್ವತಃ ಮುಖ್ಯಮಂತ್ರಿಗಳು ಸ್ಪೀಕರ್ ಕಚೇರಿಗೆ ಬಂದು, ಕಚೇರಿಯ ಬಾಗಿಲು ಹಾಕಿಕೊಂಡು ಸುಮಾರು ಒಂದೂವರೆ ಗಂಟೆಗಳ ಕಾಲ ಕುಳಿತು ಬೆದರಿಕೆ ಹಾಗೂ ದೌರ್ಜನ್ಯದ ಧಾಟಿಯಲ್ಲಿ ರಾಜೀನಾಮೆ ಪಡೆದರು. ಈ ಘಟನೆ ನನಗೆ ಅಪಾರ ನೋವು ತಂದಿದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಗಂಭೀರ ಆರೋಪ ಮಾಡಿದರು.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜುಲೈ 24ರಂದು ರಾತ್ರಿ 11 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕರೆ ಮಾಡಿ, ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು ಎಂದು ತಿಳಿಸಿದರು.
ಆದರೆ, ಆಗಸ್ಟ್ 14ರಂದು ವಿಧಾನ ಪರಿಷತ್ ಅಧಿವೇಶನವನ್ನು ಕರೆದು, ಸದನದ ಎಲ್ಲ ಸದಸ್ಯರಿಗೆ ಕೃತಜ್ಞತೆ ಹಾಗೂ ಧನ್ಯವಾದ ಅರ್ಪಿಸಿದ ಬಳಿಕವೇ ರಾಜೀನಾಮೆ ನೀಡಬೇಕೆಂದು ನಾನು ನಿರ್ಧರಿಸಿದ್ದೆ. ಆದರೆ, ನನಗೆ ಆ ಅವಕಾಶವೂ ದೊರೆಯಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನನ್ನ ಆಪ್ತ ಕಾರ್ಯದರ್ಶಿಗೆ ನನ್ನ ಶಿರೋನಾಮೆಯ ಲೆಟರ್ ತರಲು ಹೇಳಿ, ಯಾವುದೇ ಸೂಕ್ತ ಕಾರಣವನ್ನು ತಿಳಿಸದೇ ತಾವೇ ರಾಜೀನಾಮೆ ಪತ್ರವನ್ನು ಟೈಪ್ ಮಾಡಿಸಿ ನನ್ನಿಂದ ಸಹಿ ಪಡೆಯಲಾಯಿತು. ಈ ರೀತಿಯಲ್ಲಿ ರಾಜೀನಾಮೆ ಪಡೆಯುವುದು ನನಗೆ ನಿಜಕ್ಕೂ ಅತ್ಯಂತ ನೋವುಂಟು ಮಾಡಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.
ಸದನದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಗೌರವಯುತವಾಗಿ ಸ್ಥಾನದಿಂದ ನಿರ್ಗಮಿಸಬೇಕೆಂಬುದು ನನ್ನ ಆಶಯವಾಗಿತ್ತು. ಆದರೆ, ಅದಕ್ಕೆ ಅವಕಾಶ ನೀಡದೆ ಬೆದರಿಕೆಯ ಹಾಗೂ ಒತ್ತಡದ ವಾತಾವರಣದಲ್ಲಿ ರಾಜೀನಾಮೆ ಪಡೆಯಲಾಯಿತು. ಈ ಘಟನೆ ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ ಎಂದು ಬಸವರಾಜ ಹೊರಟ್ಟಿ ಬೇಸರದಿಂದ ಹೇಳಿದರು.



