HomeGadag Newsಗದಗ ಜಿಲ್ಲೆ ಬರ ಘೋಷಣೆಗಾಗಿ ಸಿಡಿದೆದ್ದ ಜೆನ್‌ ಜಿ ಶಕ್ತಿ

ಗದಗ ಜಿಲ್ಲೆ ಬರ ಘೋಷಣೆಗಾಗಿ ಸಿಡಿದೆದ್ದ ಜೆನ್‌ ಜಿ ಶಕ್ತಿ

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಬರದ ಕರಿನೆರಳು ಆವರಿಸಿದ್ದರೂ ಗದಗ ಜಿಲ್ಲೆಯನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವ ಕ್ರಮದ ವಿರುದ್ಧ ರೈತರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಸೋಮವಾರ ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗದಗ ಜಿಲ್ಲೆಯ ಎಲ್ಲ ಅರ್ಹ ತಾಲೂಕುಗಳನ್ನು ತಕ್ಷಣವೇ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿ ಜೆನ್ ಜಿ ವೋಟರ್ಸ್ ಅಂಡ್ ಸಿಟಿಜನ್ಸ್ ಫೋರಂ ಹಾಗೂ ರೈತರ ಒಕ್ಕೂಟದ ನೇತೃತ್ವದಲ್ಲಿ ‘ರೈತರ ನ್ಯಾಯಕ್ಕಾಗಿ ಜನಶಕ್ತಿ ಪಾದಯಾತ್ರೆ’ ನಡೆಯಿತು.

ನಗರದ ಚನ್ನಮ್ಮ ವೃತ್ತದಿಂದ ಆರಂಭವಾದ ಪಾದಯಾತ್ರೆಯಲ್ಲಿ ರೈತರು ಮತ್ತು ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಹಾಗೂ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಮುಳಗುಂದ ನಾಕಾದಲ್ಲಿ ಮಾನವ ಸರಪಳಿ

ಪಾದಯಾತ್ರೆ ಮುಳಗುಂದ ನಾಕಾ ತಲುಪುತ್ತಿದ್ದಂತೆ ಪ್ರತಿಭಟನಾಕಾರರು ರಸ್ತೆ ಮಧ್ಯೆ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯತ್ತ ಸಾಗಿದ ಪ್ರತಿಭಟನಾಕಾರರು, ಗದಗ–ಹುಬ್ಬಳ್ಳಿ ಹೆದ್ದಾರಿಯಲ್ಲೂ ರಸ್ತೆ ತಡೆದು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.

ಈ ವೇಳೆ ರಸ್ತೆ ತಡೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಖಾಸಗಿ ವಾಹನವೊಂದು ಮುಂದೆ ಸಾಗಲು ಮುಂದಾದಾಗ ಪ್ರತಿಭಟನಾಕಾರರು ವಾಹನವನ್ನು ತಡೆದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದವೂ ನಡೆಯಿತು. ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

“ಗದಗ ಜಿಲ್ಲೆಗೆ ಮಲತಾಯಿ ಧೋರಣೆ”

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜೆನ್ ಜಿ ವೋಟರ್ಸ್ ಅಂಡ್ ಸಿಟಿಜನ್ಸ್ ಫೋರಂ ರೂವಾರಿ ಅನಿಲ ಮೆಣಸಿನಕಾಯಿ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆಗಳು ನೆಲಕಚ್ಚಿವೆ. ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದರೂ ಗದಗ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ ಎಂದು ತೀವ್ರವಾಗಿ ಆರೋಪಿಸಿದರು.

ಬರ ಘೋಷಣೆಗೆ ಕೇವಲ ಹಳೆಯ ಮಳೆ ಅಂಕಿ-ಅಂಶಗಳನ್ನು ಪರಿಗಣಿಸುವ ಬದಲು, ಕಂದಾಯ, ಕೃಷಿ ಮತ್ತು ಜಲಸಂಪನ್ಮೂಲ ಇಲಾಖೆಗಳ ವಿಶೇಷ ತಜ್ಞರ ತಂಡವನ್ನು ರಚಿಸಿ ಗ್ರಾಮವಾರು ವಾಸ್ತವಿಕ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಮಣ್ಣಿನ ತೇವಾಂಶ, ಅಂತರ್ಜಲ ಮಟ್ಟದ ಕುಸಿತ ಹಾಗೂ ನೈಜ ಬೆಳೆ ನಷ್ಟದ ಪ್ರಮಾಣವನ್ನು ಆಧರಿಸಿ ಸರ್ಕಾರಕ್ಕೆ ತುರ್ತು ವರದಿ ಸಲ್ಲಿಸುವ ಮೂಲಕ ಗದಗ ಜಿಲ್ಲೆಯ ವಾಸ್ತವಿಕ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ರಕ್ತ ಸಹಿ ಅಭಿಯಾನದ ಮಾಹಿತಿ ಮುಖ್ಯಮಂತ್ರಿಗಳಿಗೆ ನೀಡಿ

ಜಿಲ್ಲಾಡಳಿತವು ವಾಸ್ತವಿಕ ಪರಿಸ್ಥಿತಿಯ ಸಮಗ್ರ ವರದಿ ಸಿದ್ಧಪಡಿಸಿ, ಜನರು ನಡೆಸುತ್ತಿರುವ ರಕ್ತ ಸಹಿ ಅಭಿಯಾನದ ಬಗ್ಗೆಯೂ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಬೇಕು ಎಂದು ಅನಿಲ ಮೆಣಸಿನಕಾಯಿ ಒತ್ತಾಯಿಸಿದರು.

ಬರ ಘೋಷಣೆ ವಿಷಯದಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಉತ್ತರ ಕರ್ನಾಟಕ ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ, ಬಿಜೆಪಿ ಮುಖಂಡ ಸಿದ್ದಪ್ಪ ಪಲ್ಲೇದ, ರೈತ ಮುಖಂಡ ಶಂಕರಗೌಡ ಜಯನಗೌಡ್ರ, ಶಿವರಾಮಕೃಷ್ಣ ಸೇವಾ ಸಮಿತಿಯ ರಾಜು ಖಾನಪ್ಪನವರ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ವಸಂತ ಪಡಗದ, ವಿನೋದ ಮೊರಬದ, ಅಯ್ಯಪ್ಪ ಅಂಗಡಿ, ಮೋಹನ ವರವಿ, ಕುಮಾರ ಮಾರನಬಸರಿ, ರಜತ್ ಭೀಮಕರ, ಅಶೋಕ ಕರೂರ, ಎಂ.ಪಿ. ಮುಳಗುಂದ, ಡಿ.ಬಿ. ಕರಿಗೌಡ್ರ, ಅಪ್ಪು ನಮಸ್ತೆಮಠ, ಭದ್ರೇಶ ಕೂಸ್ಲಾಪುರ, ಬಾಬು ಸುಂಕದ, ಮಹೇಶ ಶಿರಹಟ್ಟಿ, ಬಾಬು ಯಲಿಗಾರ, ರವಿ ನರೇಗಲ್, ಆನಂದ ಅಂಗಡಿ, ಇರ್ಷಾದ ಮಾನ್ವಿ, ಚಂದ್ರು ಹರಿಜನ, ಕಿಶನ್ ಮೇರವಾಡೆ, ಅರವಿಂದ ಕೆಲೂರ, ರವಿ ವಗ್ಗನವರ, ಚನ್ನಮ್ಮ ಹುಳಕಣ್ಣವರ, ಸ್ವಾತಿ ಅಕ್ಕಿ, ಸಂಗು ಚಿತ್ತರಗಿ, ಉಡಚಪ್ಪ ಹಳ್ಳಿಕೇರಿ, ಬಸನಗೌಡ ಪೊಲೀಸಪಾಟೀಲ, ಪ್ರವೀಣ ಅಂದೇಲಿ, ಬಸವರಾಜ ಅಡ್ನೂರ, ರಾಮು ವಾಲ್ಮೀಕಿ, ಪರಮೇಶ್ ನಾಯಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಗದಗ ರೈತರ ಪ್ರಮುಖ ಬೇಡಿಕೆಗಳು

  • ಮಳೆ ಕೊರತೆ ಮತ್ತು ಬೆಳೆ ಹಾನಿಯ ವಾಸ್ತವಿಕ ಮಾನದಂಡಗಳನ್ನು ಆಧರಿಸಿ ಗದಗ ಜಿಲ್ಲೆಯ ಎಲ್ಲ ಅರ್ಹ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ತಕ್ಷಣ ಶಿಫಾರಸು ಮಾಡಬೇಕು.
  • ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಮಾನದಂಡಗಳ ಅನ್ವಯ ಸಂಕಷ್ಟದಲ್ಲಿರುವ ರೈತರಿಗೆ ನೇರ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು.
  • ಜಾನುವಾರುಗಳ ರಕ್ಷಣೆಗಾಗಿ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ತೆರೆಯಬೇಕು.
  • ಗ್ರಾಮೀಣ ಭಾಗದಲ್ಲಿ ವಿಬಿಜಿ–ರಾಮ್ ಜಿ ಯೋಜನೆಯಡಿ ಹೆಚ್ಚುವರಿ ಮಾನವ ದಿನಗಳ ಉದ್ಯೋಗ ಒದಗಿಸಬೇಕು.
  • ಸಂಕಷ್ಟದಲ್ಲಿರುವ ರೈತರ ಕೃಷಿ ಸಾಲ ಮರುಪಾವತಿಯನ್ನು ಪುನರ್‌ವ್ಯವಸ್ಥೆಗೊಳಿಸಿ ರೈತರಿಗೆ ಪರಿಹಾರ ಕಲ್ಪಿಸಬೇಕು.

ಗದಗ ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟು ರೈತರ ಬೆಳೆಗಳು ನೆಲಕಚ್ಚಿವೆ. ಕೇವಲ ಹಳೆಯ ಮಳೆ ಅಂಕಿ-ಅಂಶಗಳ ಆಧಾರದ ಮೇಲೆ ಜಿಲ್ಲೆಯ ಬರ ಪರಿಸ್ಥಿತಿಯನ್ನು ನಿರ್ಧರಿಸಬಾರದು. ಗ್ರಾಮವಾರು ವಾಸ್ತವಿಕ ಸಮೀಕ್ಷೆ ನಡೆಸಿ, ಎಲ್ಲ ಅರ್ಹ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಜನರನ್ನು ಸಂಘಟಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು.

– ಅನಿಲ ಮೆಣಸಿನಕಾಯಿ, ರೂವಾರಿ, ಜೆನ್ ಜಿ ವೋಟರ್ಸ್ ಅಂಡ್ ಸಿಟಿಜನ್ಸ್ ಫೋರಂ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img