ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಿಂದೂಗಳ ಬಗ್ಗೆ ಹಿಂದೂಗಳು ದೇಶವ್ಯಾಪಿ ಜಾಗೃತರಾಗಬೇಕು. ಪ್ರತಿಯೊಬ್ಬ ಹಿಂದೂ ಪ್ರಜೆಯೂ ದೇಶ ಹಾಗೂ ಹಿಂದೂ ಸಮಾಜಕ್ಕಾಗಿ ಕೆಲಸ ಮಾಡುತ್ತೇನೆ ಎಂಬ ಸಂಕಲ್ಪ ಮಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಸಹ ಕಾರ್ಯದರ್ಶಿ ವಿನಾಯಕ ತಳಗೇರಿ ಹೇಳಿದರು.
ಪಟ್ಟಣದ ಶಂಕರ ಭಾರತಿಮಠದ ಸಮುದಾಯ ಭವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಲಕ್ಷ್ಮೇಶ್ವರ ಘಟಕದಿಂದ ಶನಿವಾರ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಗಳಿಗೆ ಹಿಂದೂಗಳು ಸಮಯ ನೀಡಬೇಕು ಹಾಗೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಪ್ರತಿಯೊಂದು ಮನೆಯಲ್ಲೂ ಹಿಂದೂ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.
ಗೋಹತ್ಯೆ, ಮತಾಂತರ ಹಾಗೂ ಲವ್ ಜಿಹಾದ್ ತಡೆಯುವ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ದೇಶದಲ್ಲಿ ಹಿಂದುತ್ವದ ಪರವಾದ ವಾತಾವರಣ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಎದುರಿಸುವ ಪರಿಸ್ಥಿತಿಯೂ ಇದೆ. ಯುವಶಕ್ತಿಯನ್ನು ಬೇರೆಡೆ ಸೆಳೆಯಲು ಷಡ್ಯಂತ್ರಗಳು ನಡೆಯುತ್ತಿದ್ದು, ಇಂತಹ ಪ್ರಯತ್ನಗಳಿಗೆ ಹಿಂದೂ ಸಮಾಜ ಕಡಿವಾಣ ಹಾಕಬೇಕು ಎಂದು ತಿಳಿಸಿದರು.
ರಕ್ಷಾ ಬಂಧನ ಹಬ್ಬವನ್ನು ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ಹಬ್ಬವು ಪರಸ್ಪರ ಸಹೋದರತ್ವ, ಏಕತೆ ಹಾಗೂ ಎಲ್ಲರೂ ಒಂದೇ ಎಂಬ ಭಾವನೆಯನ್ನು ಸಾರುತ್ತದೆ. ಕಷ್ಟದ ದಿನಗಳಲ್ಲಿಯೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಳೆದುಬಂದಿದೆ. ಇಂದು ಸಂಘದ ಚಟುವಟಿಕೆಗಳಿಗೆ ಮುಕ್ತ ಅವಕಾಶ ದೊರೆತಿದ್ದು, ವಿದೇಶಗಳಲ್ಲಿಯೂ ರಾಮನ ಜಪ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಶಾರದಾ ಸಂಗೀತ ಗುರುಕುಲದ ಸಂಸ್ಥಾಪಕ ಕೃಷ್ಣಕುಮಾರ ಕುಲಕರ್ಣಿ ಮಾತನಾಡಿ, ದೇಶ ಹಾಗೂ ಸಮಾಜಕ್ಕೆ ಕಂಟಕ ಎದುರಾದಾಗಲೆಲ್ಲ ರಕ್ಷಾ ಬಂಧನದಂತಹ ಹಬ್ಬಗಳು ಜನರಲ್ಲಿ ಆತ್ಮಸ್ಥೈರ್ಯ ತುಂಬುತ್ತವೆ. ಯುವಜನರು ದೇಶದ ಪ್ರಗತಿಗಾಗಿ ತಮ್ಮದೇ ಆದ ಕೊಡುಗೆ ನೀಡುವ ಸಂಕಲ್ಪದೊಂದಿಗೆ ಮುನ್ನಡೆದರೆ ಆದರ್ಶ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ಹಂಪಣ್ಣವರ, ತಾಲೂಕು ಕಾರ್ಯವಾಹ ಶಿವರಾಜ ಗುಜರಿ, ಸುನೀಲ ಮೆಡ್ಲೇರಿ, ಉಮೇಶ ಮಡಿವಾಳರ, ಪಾಂಡುರಂಗ ಕಾಕಡೆ, ಗುರು ಮೆಡ್ಲೇರಿ, ರಾಜು ಅರಳಿ, ಪ್ರವೀಣ, ವೈ.ಕೆ. ಲಿಂಗಶೆಟ್ಟಿ, ರೋಹಿತ ಬಾಕಳೆ, ಮುರುಗೇಶ ದುಂಡಿ, ಯಲ್ಲಪ್ಪ ಶಿರಬಡಗಿ, ಶಂಕರ ಬ್ಯಾಡಗಿ, ಮಂಜುನಾಥ ಬೆಂಗಳೂರು, ಸಂತೋಷ ಬಡಿಗೇರ ಹಾಗೂ ಕೊಟ್ರೇಶ ಅಳವಂಡಿ ಉಪಸ್ಥಿತರಿದ್ದರು.

