ಮಂಡ್ಯ: ರಾಜ್ಯದಲ್ಲಿ ನೀರಿನ ಅಭಾವದ ಆತಂಕ ಎದುರಾಗಿರುವ ನಡುವೆಯೇ ಕೆಆರ್ಎಸ್ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರಬಿಡಲಾಗುತ್ತಿದೆ.
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದ್ದರೂ, ಕೆಆರ್ಎಸ್ನಿಂದ ಹೊರಹೋಗುತ್ತಿರುವ ನೀರಿನ ಪ್ರಮಾಣ ಇದೀಗ ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕೆಆರ್ಎಸ್ ಜಲಾಶಯಕ್ಕೆ ಒಳಹರಿವು ತೀವ್ರವಾಗಿ ಕುಸಿದಿದ್ದು, ಪ್ರಸ್ತುತ 3,864 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಆದರೆ ಜಲಾಶಯದಿಂದ ಬರೋಬ್ಬರಿ 8,544 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಈ ಪೈಕಿ ಸುಮಾರು 5,500 ಕ್ಯೂಸೆಕ್ ನೀರು ನದಿಯ ಮೂಲಕ ತಮಿಳುನಾಡಿನತ್ತ ಹರಿಯುತ್ತಿದೆ ಎನ್ನಲಾಗಿದೆ.
KRSನಲ್ಲಿ ಎಷ್ಟು ನೀರಿದೆ?
124.80 ಅಡಿ ಗರಿಷ್ಠ ಸಾಮರ್ಥ್ಯದ ಕೆಆರ್ಎಸ್ ಜಲಾಶಯದಲ್ಲಿ ಸದ್ಯ 109.32 ಅಡಿ ನೀರು ಸಂಗ್ರಹವಾಗಿದೆ. ಟಿಎಂಸಿ ಲೆಕ್ಕದಲ್ಲಿ ಸುಮಾರು 31.044 ಟಿಎಂಸಿ ನೀರು ಜಲಾಶಯದಲ್ಲಿದೆ.
ಒಂದೆಡೆ ಮಳೆಯ ಕೊರತೆಯಿಂದ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಒಳಹರಿವಿಗಿಂತ ದುಪ್ಪಟ್ಟಿಗೂ ಹೆಚ್ಚು ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವುದು ಕಾವೇರಿ ಕೊಳ್ಳದ ರೈತರಲ್ಲಿ ಆತಂಕ ಹೆಚ್ಚಿಸಿದೆ.
ತಮಿಳುನಾಡಿಗೆ ನೀರು ಹರಿಸುತ್ತಿಲ್ಲ ಎಂದ ಸರ್ಕಾರ:
ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿಲ್ಲ ಎಂದು ಪ್ರತಿಪಾದಿಸುತ್ತಿದೆ. ಆದರೆ ಕೆಆರ್ಎಸ್ನಿಂದ ಕಾವೇರಿ ನದಿಗೆ ಹರಿಸಲಾಗುತ್ತಿರುವ ನೀರಿನ ಒಂದು ಭಾಗ ನದಿಯ ಮೂಲಕ ತಮಿಳುನಾಡಿಗೆ ಸೇರುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇದೇ ರೀತಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಹೊರಹರಿವು ಮುಂದುವರಿದರೆ, ಮುಂದಿನ ದಿನಗಳಲ್ಲಿ ಕಾವೇರಿ ಕೊಳ್ಳದ ರೈತರ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ ಬೆಂಗಳೂರು ಸೇರಿದಂತೆ ಹಲವು ನಗರಗಳ ಕುಡಿಯುವ ನೀರಿನ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗುತ್ತಿದೆ.
ಹೀಗಾಗಿ ಕೆಆರ್ಎಸ್ ಜಲಾಶಯದ ಒಳಹರಿವು, ಹೊರಹರಿವು ಹಾಗೂ ನೀರಿನ ಬಳಕೆ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ರೈತರು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.



