ಬೆಂಗಳೂರು: ಕಿಚ್ಚ ಸುದೀಪ್ ಅವರ 53ನೇ ಜನ್ಮದಿನದ ಸಂಭ್ರಮಕ್ಕೆ ‘ಬಿಲ್ಲ ರಂಗ ಬಾಷಾ’ ಚಿತ್ರತಂಡ ಸರ್ಪ್ರೈಸ್ ಗಿಫ್ಟ್ ನೀಡಿದೆ. ಹಿಮಾಚ್ಛಾದಿತ ಪ್ರದೇಶದಲ್ಲಿ ಬೈಕ್ ಮೇಲೆ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಸುದೀಪ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಪೋಸ್ಟರ್‌ನಲ್ಲಿ ಸುದೀಪ್ ಗಾಗಲ್ಸ್ ಧರಿಸಿ, ವಿಭಿನ್ನ ವಿನ್ಯಾಸದ ಕೋಟ್‌ನಲ್ಲಿ ಬೈಕ್ ರೈಡ್ ಮಾಡುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ. ಹಿಮದ ನಡುವೆ ಬೈಕ್ ವೇಗವಾಗಿ ಸಾಗುತ್ತಿದ್ದರೆ, ಆಕಾಶದಲ್ಲಿ ಹೆಲಿಕಾಪ್ಟರ್ ಹಾರುತ್ತಿರುವುದು ಕಾಣಿಸುತ್ತದೆ. ಇದರ ಜೊತೆಗೆ ವಿಮಾನ ಹಾಗೂ ರೈಲು ಪಲ್ಟಿಯಾಗುತ್ತಿರುವ ದೃಶ್ಯಗಳು ಚಿತ್ರದ ಆ್ಯಕ್ಷನ್ ಪ್ರಮಾಣದ ಬಗ್ಗೆ ಕುತೂಹಲ ಮೂಡಿಸಿವೆ.
ಸುದೀಪ್ ಅವರ ಈ ಲುಕ್ ಅಭಿಮಾನಿಗಳಿಗೆ ಸಂಪೂರ್ಣ ಹೊಸ ಅನುಭವ ನೀಡಿದೆ. ಸಾಮಾನ್ಯ ಮಾಸ್ ಲುಕ್‌ಗಿಂತ ಭಿನ್ನವಾಗಿ ಫ್ಯೂಚರಿಸ್ಟಿಕ್ ಹಾಗೂ ರಗಡ್ ಶೈಲಿಯಲ್ಲಿ ಕಾಣಿಸಿಕೊಂಡಿರುವ ನಟನ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ.
‘ವಿಕ್ರಾಂತ್ ರೋಣ’ ಮೂಲಕ ಯಶಸ್ಸು ಕಂಡ ಸುದೀಪ್-ಅನೂಪ್ ಭಂಡಾರಿ ಜೋಡಿ ಮತ್ತೆ ಒಂದಾಗಿರುವುದು ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ. ‘ಬಿಲ್ಲ ರಂಗ ಬಾಷಾ’ ಇವರ ಕಾಂಬಿನೇಷನ್‌ನ ಎರಡನೇ ಸಿನಿಮಾ ಆಗಿದೆ.
ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾ ಪ್ಯಾನ್-ಇಂಡಿಯಾ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡಿದೆ. ಚಿತ್ರವು ಆ್ಯಕ್ಷನ್ ಎಂಟರ್‌ಟೈನರ್ ಆಗಿ ಮೂಡಿಬರುತ್ತಿದೆ.
ಕಾರಣಾಂತರಗಳಿಂದ ಶೂಟಿಂಗ್ ವಿಳಂಬಗೊಂಡಿದ್ದ ಸಿನಿಮಾ, ಜೂನ್‌ನಲ್ಲಿ ಮತ್ತೆ ಚಿತ್ರೀಕರಣಕ್ಕೆ ಚಾಲನೆ ಪಡೆದುಕೊಂಡಿದೆ. ಇದೀಗ ಫಸ್ಟ್ ಲುಕ್ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಚಿತ್ರದ ಕುರಿತು ಚರ್ಚೆ ಜೋರಾಗಿದೆ. ‘ಬಿಲ್ಲ ರಂಗ ಬಾಷಾ’ 2027ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.



