ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರೀಯ ಹಬ್ಬಗಳು, ದಸರಾ ಕ್ರೀಡೆಗಳು ಸೇರಿದಂತೆ ವಿವಿಧ ಕ್ರೀಡಾಕೂಟಗಳಿಗೆ ವೇದಿಕೆಯಾಗಿರುವ ನಗರದ ಜಿಲ್ಲಾ ಕ್ರೀಡಾಂಗಣವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವ ಬದಲು ಅವೈಜ್ಞಾನಿಕವಾಗಿ ಸಿಂಥೆಟಿಕ್ ಫುಟ್ಬಾಲ್ ಮೈದಾನ ನಿರ್ಮಾಣಕ್ಕೆ ಮುಂದಾಗಿರುವುದು ಖಂಡನೀಯ ಎಂದು ಹಿಂದೂ ಸಂಘಟನೆಯ ಮುಖಂಡ ರಾಜು ಖಾನಪ್ಪನವರ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭಿಸಿರುವ ಸಿಂಥೆಟಿಕ್ ಫುಟ್ಬಾಲ್ ಮೈದಾನದ ಕಾಮಗಾರಿಗೆ ಕ್ರೀಡಾಪಟುಗಳ ವಿರೋಧವಿದ್ದು, ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ ಕ್ರೀಡಾಪಟುಗಳ ಅಗತ್ಯಕ್ಕೆ ತಕ್ಕಂತೆ ಕ್ರೀಡಾಂಗಣ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಬಾಸ್ಕೆಟ್ಬಾಲ್ ಹಾಗೂ ಸ್ಕೇಟಿಂಗ್ಗೆ ಒಂದೇ ಮೈದಾನವನ್ನು ಬಳಸುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾ ಚಟುವಟಿಕೆಗಳ ಬಗ್ಗೆ ಸಮರ್ಪಕ ಅರಿವು ಹೊಂದಿರುವ ಅಧಿಕಾರಿಗಳು ಇಂತಹ ಯೋಜನೆಗಳನ್ನು ರೂಪಿಸಬೇಕಿತ್ತು. ಆದರೆ, ಕ್ರೀಡಾಪಟುಗಳಿಗೆ ಅನುಕೂಲವಾಗುವ ಬದಲು ತೊಂದರೆ ಉಂಟುಮಾಡುವ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ದೂರಿದರು.
ಸಿಂಥೆಟಿಕ್ ಫುಟ್ಬಾಲ್ ಮೈದಾನ ನಿರ್ಮಿಸಿದರೆ ಅದರೊಳಗೆ ಇತರರು ಓಡಾಡಲು ಸಾಧ್ಯವಾಗುವುದಿಲ್ಲ. ಜತೆಗೆ ಸಿಂಥೆಟಿಕ್ ಮೈದಾನದ ನಿರ್ವಹಣೆಯೂ ಕಷ್ಟಕರವಾಗಿದೆ. ಹೀಗಿರುವಾಗ ಜಿಲ್ಲಾ ಕ್ರೀಡಾಂಗಣದಂತಹ ಬಹುಪಯೋಗಿ ಮೈದಾನದಲ್ಲಿ ಇಂತಹ ಕಾಮಗಾರಿಗೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.
ಈಗಾಗಲೇ ಅಥ್ಲೆಟಿಕ್ಸ್ ಟ್ರ್ಯಾಕ್ನಲ್ಲಿಯೂ ಸಮರ್ಪಕ ವ್ಯವಸ್ಥೆ ಇಲ್ಲ. ಕೇವಲ ನಾಲ್ಕು ಮಂದಿ ಏಕಕಾಲಕ್ಕೆ ಓಡುವಷ್ಟು ಮಾತ್ರ ಅವಕಾಶವಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸುವ ಬದಲು ಮತ್ತೊಂದು ಸಿಂಥೆಟಿಕ್ ಗ್ರೌಂಡ್ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಸ್ಥಳೀಯ ಕ್ರೀಡಾಪಟುಗಳು ಹಾಗೂ ಮಕ್ಕಳಿಗೆ ಆಟವಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈಗಿರುವ ಸಿಂಥೆಟಿಕ್ ಟ್ರ್ಯಾಕ್ಗೆ ಸುಮಾರು 18 ವರ್ಷಗಳಾಗಿದ್ದು, ಅದರ ಬಳಕೆಯ ಅವಧಿಯೂ ಮುಗಿದಿದೆ. ಹೀಗಾಗಿ ಅದರ ಸ್ಥಿತಿಗತಿ ಪರಿಶೀಲಿಸಿ, ಕ್ರೀಡಾಪಟುಗಳ ಅಗತ್ಯಕ್ಕೆ ಅನುಗುಣವಾಗಿ ಹೊಸ ವ್ಯವಸ್ಥೆ ರೂಪಿಸಬೇಕು. ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಈ ಕುರಿತು ತಕ್ಷಣ ಗಮನಹರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಕ್ರೀಡಾ ಇಲಾಖೆಯ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕ್ರೀಡಾಪಟುಗಳ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು. ಫುಟ್ಬಾಲ್ ಮೈದಾನ ನಿರ್ಮಾಣದ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ, ಜಿಲ್ಲೆಯ ವಿವಿಧ ಕ್ರೀಡೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ರವಿಕಾಂತ ಅಂಗಡಿ ಮಾತನಾಡಿ, ಕ್ರೀಡಾ ಇಲಾಖೆಯಲ್ಲಿ ಕ್ರೀಡೆ ಬಗ್ಗೆ ಸಂಪೂರ್ಣ ಜ್ಞಾನ ಹಾಗೂ ಅನುಭವ ಹೊಂದಿರುವ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಹಲವು ಇಲಾಖೆಗಳ ಜವಾಬ್ದಾರಿಯನ್ನು ಒಬ್ಬರೇ ಅಧಿಕಾರಿಗಳು ನಿರ್ವಹಿಸುತ್ತಿರುವುದರಿಂದ ಕ್ರೀಡಾ ಕ್ಷೇತ್ರದ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ ಎಂದು ಹೇಳಿದರು.
ಪ್ರಭಾರಿ ಅಧಿಕಾರಿಗಳ ಮೂಲಕ ಈ ರೀತಿಯ ಮಹತ್ವದ ಕಾಮಗಾರಿಗಳನ್ನು ನಿರ್ವಹಿಸುವುದು ಕ್ರೀಡಾಪಟುಗಳಿಗೆ ತೊಂದರೆ ಉಂಟುಮಾಡುತ್ತಿದೆ. ಈಗಿರುವ ಮೈದಾನವನ್ನು ಅದರ ಮೂಲ ಸ್ವರೂಪದಲ್ಲಿಯೇ ಸಮರ್ಪಕವಾಗಿ ಅಭಿವೃದ್ಧಿಪಡಿಸಬೇಕು. ಕ್ರೀಡಾಪಟುಗಳಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸದೆ ಹೊಸ ಕಾಮಗಾರಿಗಳಿಗೆ ಮುಂದಾಗುವುದು ಸರಿಯಲ್ಲ ಎಂದರು.
ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ, ಕ್ರೀಡಾ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆಯಿದೆ. ಮೂರು-ನಾಲ್ಕು ಇಲಾಖೆಗಳ ಜವಾಬ್ದಾರಿಯನ್ನು ಒಬ್ಬ ಅಧಿಕಾರಿಗೆ ವಹಿಸುವುದರಿಂದ ಕ್ರೀಡಾ ಚಟುವಟಿಕೆಗಳ ಮೇಲ್ವಿಚಾರಣೆಗೆ ತೊಂದರೆಯಾಗುತ್ತಿದೆ. ಕ್ರೀಡಾ ಕ್ಷೇತ್ರದ ಬಗ್ಗೆ ಜ್ಞಾನ ಹೊಂದಿರುವ ಅಧಿಕಾರಿಗಳನ್ನು ನೇಮಕ ಮಾಡಬೇಕು. ಫುಟ್ಬಾಲ್ ಮೈದಾನ ನಿರ್ಮಾಣಕ್ಕೆ ಕ್ರೀಡಾಂಗಣದ ಹೃದಯಭಾಗದಲ್ಲಿರುವ ವಾಕಿಂಗ್ ಸಾಲನ್ನು ಬಳಸಬೇಕು ಎಂದು ಒತ್ತಾಯಿಸಿದರು.
ಅರವಿಂದ ಹುಲ್ಲೂರು ಮಾತನಾಡಿ, ಸಿಂಥೆಟಿಕ್ ಟ್ರ್ಯಾಕ್ಗೆ ಪ್ರತಿದಿನ ನೀರುಣಿಸುವ ಅಗತ್ಯವಿದೆ. ಆದರೆ, ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಸೌಲಭ್ಯವೇ ಸಮರ್ಪಕವಾಗಿಲ್ಲ. ಮೂಲಸೌಲಭ್ಯಗಳನ್ನೇ ಕಲ್ಪಿಸದೆ ದುಬಾರಿ ಕಾಮಗಾರಿಗಳಿಗೆ ಆದ್ಯತೆ ನೀಡುವುದು ಎಷ್ಟರ ಮಟ್ಟಿಗೆ ಸೂಕ್ತ ಎಂದು ಪ್ರಶ್ನಿಸಿದರು.
ಕ್ರೀಡಾ ಕ್ಷೇತ್ರದ ಬಗ್ಗೆ ಜ್ಞಾನ ಹೊಂದಿರುವ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಜಿಲ್ಲಾ ಕ್ರೀಡಾಂಗಣವನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಿ, ಕ್ರೀಡಾಪಟುಗಳ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಮೇಶ ನಾಯಕ್, ಮಹಾಂತೇಶ ಪಾಟೀಲ, ದೇವರಾಜ ದೊಡ್ಡಮನಿ, ನಾಗರಾಜ ಬಂಡಿವಡ್ಡರ, ಮಲ್ಲಿಕಾರ್ಜುನ ಬನ್ನಿಗಿಡದ, ಸಾಗರ, ಪ್ರಭು ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಿಲ್ಲಾ ಕ್ರೀಡಾಂಗಣವು ಎಲ್ಲ ಕ್ರೀಡಾಪಟುಗಳಿಗೂ ಉಪಯೋಗವಾಗುವಂತಿರಬೇಕು. ಅವೈಜ್ಞಾನಿಕ ಕಾಮಗಾರಿಗಳ ಮೂಲಕ ಅದರ ಮೂಲ ಸ್ವರೂಪಕ್ಕೆ ಧಕ್ಕೆ ತರಬಾರದು. ಸಿಂಥೆಟಿಕ್ ಫುಟ್ಬಾಲ್ ಮೈದಾನ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ, ಸ್ಥಳೀಯ ಕ್ರೀಡಾಪಟುಗಳು ಹಾಗೂ ಮಕ್ಕಳ ಅಗತ್ಯಕ್ಕೆ ತಕ್ಕ ಮೂಲಸೌಕರ್ಯ ಕಲ್ಪಿಸಬೇಕು.
– ರಾಜು ಖಾನಪ್ಪನವರ



