ಒಂದು ಮಗು ಮೊದಲ ಬಾರಿಗೆ ಶಾಲೆಯ ಬಾಗಿಲು ದಾಟಿದಾಗ ಅದರ ಕೈಯಲ್ಲಿ ಪುಸ್ತಕ, ಕಣ್ಣಲ್ಲಿ ಕನಸು ಇರುತ್ತದೆ. ಆ ಕನಸಿಗೆ ಅಕ್ಷರದ ರೂಪ ನೀಡಿ, ಬದುಕಿನ ದಾರಿ ತೋರಿಸುವವರು ಶಿಕ್ಷಕರು. ತಾಯಿ-ತಂದೆಯ ನಂತರ ಮಗುವಿನ ಬದುಕಿನ ಮೇಲೆ ಅತ್ಯಂತ ಗಾಢವಾದ ಪ್ರಭಾವ ಬೀರುವ ವ್ಯಕ್ತಿ ಗುರು. ಹೀಗಾಗಿ ಶಿಕ್ಷಕ ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ, ಒಂದು ತಲೆಮಾರನ್ನು ರೂಪಿಸುವ ಶಿಲ್ಪಿ.
ಸೆಪ್ಟೆಂಬರ್ 5ರಂದು ಶಿಕ್ಷಕರಿಗೆ ಹೂವು, ಹಾರ, ಶಾಲು ಮತ್ತು ಸನ್ಮಾನಗಳ ಮೂಲಕ ಗೌರವ ಸಲ್ಲಿಸುತ್ತೇವೆ. ‘ಗುರುವೇ ದೇವರು’ ಎಂದು ಕೊಂಡಾಡುತ್ತೇವೆ. ಆದರೆ ಆ ಗುರುವಿನ ನಿತ್ಯ ಬದುಕನ್ನು ಗಮನಿಸಿದಾಗ, ಅವರ ಕೈಯಲ್ಲಿ ಪಠ್ಯಪುಸ್ತಕದ ಜೊತೆಗೆ ಹತ್ತಾರು ಸರ್ಕಾರಿ ಕರ್ತವ್ಯಗಳ ಕಡತಗಳೂ ಕಾಣಿಸುತ್ತವೆ. ಮಕ್ಕಳಿಗೆ ಅಕ್ಷರ ಕಲಿಸಬೇಕಾದ ಶಿಕ್ಷಕರೇ ಇಂದು ಗಣತಿ, ಸಮೀಕ್ಷೆ, ಮತದಾರರ ಮಾಹಿತಿ ಸಂಗ್ರಹ, ಚುನಾವಣಾ ಕರ್ತವ್ಯ ಹಾಗೂ ವಿವಿಧ ಆಡಳಿತಾತ್ಮಕ ಕಾರ್ಯಗಳಲ್ಲಿ ತೊಡಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದು ಶಿಕ್ಷಕನ ಗಂಟೆ ಎಂದರೆ ನೂರಾರು ಮಕ್ಕಳ ಸಮಯ
ಶಿಕ್ಷಕನ ಒಂದು ಗಂಟೆ ಕೇವಲ ಅವರ ವೈಯಕ್ತಿಕ ಸಮಯವಲ್ಲ, ಅದು ಅನೇಕ ವಿದ್ಯಾರ್ಥಿಗಳ ಕಲಿಕೆಯ ಸಮಯ. ಶಾಲೆಯ ಹಾಜರಾತಿ, ಪಾಠ ಬೋಧನೆ, ಪರೀಕ್ಷೆ, ಮೌಲ್ಯಮಾಪನ ಮತ್ತು ವಿದ್ಯಾರ್ಥಿಗಳ ಕಲಿಕಾ ಮಟ್ಟ ಪರಿಶೀಲನೆಯ ನಡುವೆಯೇ ಹೆಚ್ಚುವರಿ ಸರ್ಕಾರಿ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಪರಿಣಾಮವಾಗಿ ದೈಹಿಕ ಹಾಗೂ ಮಾನಸಿಕ ಒತ್ತಡ ಹೆಚ್ಚುವುದರ ಜೊತೆಗೆ ತರಗತಿಯ ಮೇಲೂ ಪರಿಣಾಮ ಬೀರುತ್ತದೆ.
ಗಣತಿಯ ಒಂದು ಅಂಕಿ, ಸಮೀಕ್ಷೆಯ ಒಂದು ಮಾಹಿತಿ ಅಥವಾ ಮತದಾರರ ಪಟ್ಟಿಯಲ್ಲಿನ ಒಂದು ಹೆಸರಿನ ಹಿಂದೆ ಶಿಕ್ಷಕರ ಹಲವು ಗಂಟೆಗಳ ಶ್ರಮ ಅಡಗಿರುತ್ತದೆ. ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವುದು, ದಾಖಲೆ ಪರಿಶೀಲಿಸುವುದು ಮತ್ತು ವರದಿ ಸಲ್ಲಿಸುವುದು ಸುಲಭದ ಕೆಲಸವಲ್ಲ.
ಗುರುವಿಗೆ ಗೌರವ ಎಂದರೆ ಅವರ ಸಮಯಕ್ಕೂ ಗೌರವ
ಶಿಕ್ಷಕರ ದಿನದಂದು ಶಾಲು ಹೊದಿಸುವುದು ಮತ್ತು ಹೂವು ನೀಡುವುದು ಗೌರವದ ಸಂಕೇತವಾಗಬಹುದು. ಆದರೆ ನಿಜವಾದ ಗೌರವ ಎಂದರೆ ಶಿಕ್ಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವಂತಹ ವಾತಾವರಣ ನಿರ್ಮಿಸುವುದು. ಹೆಚ್ಚುವರಿ ಕರ್ತವ್ಯಗಳನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಾಗದಿದ್ದರೂ, ಶಿಕ್ಷಣಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅವುಗಳನ್ನು ನಿರ್ವಹಿಸುವ ವ್ಯವಸ್ಥೆ ಅಗತ್ಯ.
ಗುರುವಿನ ಕೈಯಲ್ಲಿ ಪುಸ್ತಕ ಇರಲಿ, ಕಣ್ಣ ಮುಂದೆ ವಿದ್ಯಾರ್ಥಿಗಳ ಕನಸು ಇರಲಿ. ಏಕೆಂದರೆ ಶಿಕ್ಷಕರ ಸಮಯ ಕಳೆದುಹೋದರೆ ಕೇವಲ ಒಂದು ದಿನದ ಪಾಠವಲ್ಲ; ಕೆಲವೊಮ್ಮೆ ಒಂದು ಮಗುವಿನ ಕಲಿಕೆಯ ಅವಕಾಶವೇ ಕಳೆದುಹೋಗಬಹುದು.
ಗುರುವಿಗೆ ಹೂವು ನೀಡುವುದಕ್ಕಿಂತ ಅವರ ಕೆಲಸಕ್ಕೆ ಗೌರವ ನೀಡೋಣ; ಶಾಲು ಹೊದಿಸುವುದಕ್ಕಿಂತ ಅವರ ಸಮಯವನ್ನು ಮಕ್ಕಳಿಗಾಗಿ ಉಳಿಸೋಣ. ಏಕೆಂದರೆ ಶಿಕ್ಷಕರ ಕೈಯಲ್ಲಿದೆ ನಾಳೆಯ ಸಮಾಜದ ಭವಿಷ್ಯ.

–ಸಿಕಂದರ ಎಂ. ಆರಿ
ವಕೀಲರು ಹಾಗೂ ಸಾಹಿತಿಗಳು

