ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಸಾಹಿತ್ಯ, ವಚನ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರು ಸಲ್ಲಿಸಿದ ಸೇವೆ ಅಪಾರ ಮತ್ತು ಅನುಪಮವಾದದ್ದು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2813ನೇ ಶಿವಾನುಭವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು, ಅನೇಕ ಶರಣರ ವಚನಗಳ ಸಂಶೋಧನೆ, ಸಂಪಾದನೆ ಹಾಗೂ ಪ್ರಕಟಣೆಯ ಮೂಲಕ ಡಾ. ಕಲಬುರ್ಗಿ ಅವರು ವಚನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದರು.
ತೋಂಟದಾರ್ಯ ಮಠದ ಪುಸ್ತಕ ಪ್ರಕಟಣೆಯ ಕಾರ್ಯದ ಹಿಂದಿನ ಪ್ರಮುಖ ಶಕ್ತಿಯಾಗಿದ್ದ ಡಾ. ಎಂ.ಎಂ. ಕಲಬುರ್ಗಿ ಅವರು ಸದಾಕಾಲ ಸ್ಮರಣೀಯರು. ಶ್ರೇಷ್ಠ ಶಿಕ್ಷಕ, ಸಂಶೋಧಕ ಹಾಗೂ ಸಮರ್ಥ ಆಡಳಿತಾಧಿಕಾರಿಯಾಗಿದ್ದ ಅವರು ವೈಚಾರಿಕ ಚಿಂತನೆಯ ಪ್ರತಿಪಾದಕರಾಗಿದ್ದರು ಎಂದು ಶ್ರೀಗಳು ಸ್ಮರಿಸಿದರು.
ಶ್ರಾವಣ ಮಾಸವು ಲಿಂಗಾಯತ ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿದೆ. ಬಸವಾದಿ ಶರಣರ ಆದರ್ಶಗಳು ಮತ್ತು ಮಹಾತ್ಮರ ಸಂದೇಶಗಳನ್ನು ಕೇಳುವುದರೊಂದಿಗೆ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅಷ್ಟಮದ ಆರು ವೈರಿಗಳು ಹಾಗೂ ಸಪ್ತವ್ಯಸನಗಳಿಂದ ದೂರವಾಗಿ ಶರಣರ ಮಾರ್ಗದಲ್ಲಿ ಸಾಗಿದಾಗ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಡಾ. ಶರಣಬಸವ ವೆಂಕಟಾಪೂರ ಅವರು, ಆಳವಾದ ಅಧ್ಯಯನ, ಹೊಸ ವಿಷಯಗಳ ಹುಡುಕಾಟ ಮತ್ತು ಸಂಶೋಧನೆಯೇ ಡಾ. ಎಂ.ಎಂ. ಕಲಬುರ್ಗಿ ಅವರ ಜೀವನಧ್ಯೇಯವಾಗಿತ್ತು ಎಂದರು. ವಚನ ಸಾಹಿತ್ಯದ ಸಂಶೋಧನೆ, ಸಂಪಾದನೆ ಹಾಗೂ ಪ್ರಕಟಣೆಯಲ್ಲಿ ಅವರು ಮಾಡಿದ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಕನ್ನಡ ಮತ್ತು ವಚನ ಸಾಹಿತ್ಯದ ಬೆಳವಣಿಗೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಕಲಬುರ್ಗಿ ಅವರು, ಕರ್ನಾಟಕದಲ್ಲಿ ಉದಯವಾದ ಲಿಂಗಾಯತ ಧರ್ಮವು ತನ್ನ ವಿಶಿಷ್ಟತೆಯೊಂದಿಗೆ ಸ್ವತಂತ್ರವಾಗಿ ಬೆಳೆಯಬೇಕು ಎಂಬ ಆಶಯ ಹೊಂದಿದ್ದರು ಎಂದು ಹೇಳಿದರು.
ನಾರಿ ಸಮ್ಮಾನ ಪುರಸ್ಕೃತರಿಗೆ ಗೌರವ
ಇದೇ ಸಂದರ್ಭದಲ್ಲಿ ನಾರಿ ಸಮ್ಮಾನ ಪುರಸ್ಕೃತರಾದ ಗದುಗಿನ ಶ್ರೀಮತಿ ಸುವರ್ಣ ಸದಾಶಿವಯ್ಯ ಮದರಿಮಠ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಶರಣೆ ಗಿರಿಜಕ್ಕ ಧರ್ಮರಡ್ಡಿ ಅವರು ‘ಶರಣರು ಕಂಡ ಅನಾದಿ ಬಸವಣ್ಣ’ ವಿಷಯ ಕುರಿತು ಪ್ರವಚನ ನೀಡಿದರು. ರೇವಣಸಿದ್ದಯ್ಯ ಮರಿದೇವರಮಠ ಹಾಗೂ ಬಸವರಾಜ ಗಣಪ್ಪನವರ ದಾಸೋಹ ಸೇವೆ ವಹಿಸಿದ್ದರು. ಸೂರಜ ಮರಿಗೌಡರ ಧರ್ಮಗ್ರಂಥ ಪಠಣ ನಡೆಸಿದರೆ, ಕೃತಿಕಾ ಮರಿಗೌಡ ವಚನ ಚಿಂತನ ಮಾಡಿದರು.
ವಿಜಯ ಕಿರೇಸೂರ ನಿರ್ದೇಶನದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಕುರಿತ ಕೈಗೊಂಬೆ ಆಟವನ್ನು ಕದಾಂಪೂರ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಪ್ರದರ್ಶಿಸಿದರು. ಕಾರ್ಯಕ್ರಮವನ್ನು ವಿದ್ಯಾ ಗಂಜಾಳ ನಿರೂಪಿಸಿದರು. ಡಾ. ಉಮೇಶ ಪುರದ ಸ್ವಾಗತಿಸಿದರು.
ಶಿವಾನುಭವದಲ್ಲಿ ಸಂಘದ ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.
ವಚನ ಸಾಹಿತ್ಯವನ್ನು ಕೇವಲ ಅಧ್ಯಯನದ ವಿಷಯವಾಗಿ ನೋಡದೆ, ಅದರ ಆಳಕ್ಕೆ ಇಳಿದು ಸಂಶೋಧನೆ, ಸಂಪಾದನೆ ಮತ್ತು ಪ್ರಕಟಣೆಯ ಮೂಲಕ ಮುಂದಿನ ಪೀಳಿಗೆಗೆ ತಲುಪಿಸಿದ ಮಹತ್ವದ ಸಾಧಕರಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರು ಅಗ್ರಗಣ್ಯರು. ಅವರ ಸಾಹಿತ್ಯಿಕ ಮತ್ತು ಸಂಶೋಧನಾ ಸೇವೆ ಸದಾಕಾಲ ಸ್ಮರಣೀಯ.
— ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು



