ಬೆಂಗಳೂರು: ಜಮೀನಿನ ಖಾತಾ ಬದಲಾವಣೆ ವಿಚಾರದ ಹಳೆಯ ವೈಷಮ್ಯದಿಂದ ಕಾಫಿ ತೋಟದ ರಸ್ತೆಯಲ್ಲಿ ವ್ಯಕ್ತಿಯೊಬ್ಬರನ್ನು ಬಂದೂಕಿನಿಂದ ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ಆರೋಪಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಚೆರಂಡ ಮೋಹನ್‌ಗೆ ಜೀವಾವಧಿ ಜೈಲು ಶಿಕ್ಷೆ ಜೊತೆಗೆ 1.10 ಲಕ್ಷ ರೂಪಾಯಿ ದಂಡ ವಿಧಿಸಿರುವ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ಖುಲಾಸೆ ಆದೇಶವನ್ನು ರದ್ದುಗೊಳಿಸಿದೆ.
ವಿಚಾರಣಾ ನ್ಯಾಯಾಲಯದ ಖುಲಾಸೆ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಹಾಗೂ ನ್ಯಾಯಮೂರ್ತಿ ಬಿ. ಪ್ರಮೋದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಪ್ರಕರಣದ ಪ್ರಮುಖ ಸಾಕ್ಷ್ಯವಾಗಿ ಮೃತರ ಪತ್ನಿಯ ಹೇಳಿಕೆಯನ್ನು ನ್ಯಾಯಪೀಠ ಪರಿಗಣಿಸಿದೆ. ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಓಡಿಬಂದಿದ್ದ ಮೃತರ ಪತ್ನಿ, ಕೈಯಲ್ಲಿ ಬಂದೂಕು ಹಿಡಿದು ಬರುತ್ತಿದ್ದ ಆರೋಪಿಯನ್ನು ಕಂಡಿದ್ದರು. ಈ ವೇಳೆ ಆರೋಪಿ, “ನಿನ್ನ ಗಂಡನಿಗೆ ಬುದ್ಧಿ ಕಲಿಸಿದ್ದೇನೆ” ಎಂದು ಹೇಳಿದ್ದಾಗಿ ಅವರು ಸಾಕ್ಷ್ಯ ನೀಡಿದ್ದರು. ಈ ಹೇಳಿಕೆ ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಪ್ರಮುಖ ಸಾಕ್ಷ್ಯವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಬ್ಯಾಲಿಸ್ಟಿಕ್ ತಜ್ಞರ ಸಾಕ್ಷ್ಯವನ್ನೂ ಪೀಠ ಪರಿಗಣಿಸಿದೆ. ಮೃತರ ದೇಹದಲ್ಲಿದ್ದ ರಂಧ್ರಗಳು ಹಾಗೂ ಸ್ಥಳದಲ್ಲಿ ಪತ್ತೆಯಾದ ಗುಂಡುಗಳು ಆರೋಪಿಯ ಬಂದೂಕಿನಿಂದಲೇ ಹಾರಿಸಲ್ಪಟ್ಟಿದ್ದವು ಎಂಬುದು ಸಾಕ್ಷ್ಯಗಳಿಂದ ಸಾಬೀತಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಕೃತ್ಯ ಎಸಗಿದ ಬಳಿಕ ಆರೋಪಿಯೇ ಬಂದೂಕಿನೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ. ಆತನ ಮಾಹಿತಿ ಆಧರಿಸಿ ಗುಂಡಿನ ಖಾಲಿ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇಷ್ಟೆಲ್ಲ ಸಾಕ್ಷ್ಯಾಧಾರಗಳಿದ್ದರೂ ವಿಚಾರಣಾ ನ್ಯಾಯಾಲಯ ಅವುಗಳನ್ನು ಸೂಕ್ತವಾಗಿ ಪರಿಗಣಿಸದೆ ಆರೋಪಿಯನ್ನು ಖುಲಾಸೆಗೊಳಿಸಿದ್ದು ತಪ್ಪು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಚೆರಂಡ ಮೋಹನ್ ಅವರನ್ನು ಐಪಿಸಿ ಸೆಕ್ಷನ್ 302 ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 27ರ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಗಿದೆ. ಜೀವಾವಧಿ ಶಿಕ್ಷೆ ಜೊತೆಗೆ 1.10 ಲಕ್ಷ ರೂಪಾಯಿ ದಂಡ ವಿಧಿಸಿರುವ ನ್ಯಾಯಪೀಠ, ದಂಡದ ಮೊತ್ತದಲ್ಲಿ 90 ಸಾವಿರ ರೂಪಾಯಿಯನ್ನು ಮೃತರ ಪತ್ನಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ.



