ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಕಥಾಹಂದರದ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿರುವ ನಟ ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಹಿಂದೆ ‘ಶಂಕರಾಭರಣ’ ಹೆಸರಿನ ಬಸ್ ಪೋಸ್ಟರ್ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆದಿದ್ದ ಚಿತ್ರತಂಡ, ಇದೀಗ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಮೋಷನ್ಗೆ ಚಾಲನೆ ನೀಡಿದೆ. ಸಿನಿಮಾ ನವೆಂಬರ್ 20ರಂದು ತೆರೆಗೆ ಬರಲು ಸಜ್ಜಾಗಿದೆ.
‘ಶಂಕರಾಭರಣ’ ಸಿನಿಮಾದಲ್ಲಿ ಶೈನ್ ಶೆಟ್ಟಿ ಬಸ್ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಂಕರಾಭರಣ ಎಂಬ ಬಸ್ನ ಚಾಲಕನಾಗಿ ಜೀವನ ಸಾಗಿಸುವ ಸಾಮಾನ್ಯ ವ್ಯಕ್ತಿಯ ಪಾತ್ರವನ್ನು ಶೈನ್ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ನಾಯಕ, ನಾಯಕಿಯಷ್ಟೇ ಅಲ್ಲದೆ ಬಸ್ ಕೂಡ ಪ್ರಮುಖ ಪಾತ್ರ ವಹಿಸಲಿದೆ ಎನ್ನುವುದು ಚಿತ್ರದ ವಿಶೇಷತೆ.
ಈ ಸಿನಿಮಾಗೆ ಸುಮಂತ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ. ‘ಏಕಂ’ ವೆಬ್ ಸಿರೀಸ್ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದ ‘ಮಿಥ್ಯ’ ಫೀಚರ್ ಸಿನಿಮಾ ನಿರ್ದೇಶಿಸಿರುವ ಸುಮಂತ್ ಭಟ್, ಇದೇ ಮೊದಲ ಬಾರಿಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ‘ಶಂಕರಾಭರಣ’ ಹಾರರ್ ಕಾಮಿಡಿ ಸಿನಿಮಾವಾಗಿದ್ದು, ಟೀಸರ್ ಚಿತ್ರದ ವಿಭಿನ್ನ ಕಥಾಹಂದರದ ಬಗ್ಗೆ ಕುತೂಹಲ ಮೂಡಿಸಿದೆ.
‘ಶಂಕರಾಭರಣ’ ಸಿನಿಮಾದ ಕಥೆಯನ್ನೂ ಶೈನ್ ಶೆಟ್ಟಿ ಅವರೇ ಬರೆದಿದ್ದಾರೆ. ತಮ್ಮ ಜೀವನದಲ್ಲಿ ಹಾಗೂ ಸುತ್ತಮುತ್ತ ಕಂಡ ಕೆಲವು ಅನುಭವಗಳನ್ನು ಆಧರಿಸಿ ಕಥೆಯನ್ನು ರೂಪಿಸಿರುವುದಾಗಿ ಶೈನ್ ತಿಳಿಸಿದ್ದಾರೆ. ಅವರ ಕಥೆಗೆ ನಿರ್ದೇಶಕ ಸುಮಂತ್ ಭಟ್ ದೃಶ್ಯ ರೂಪ ನೀಡಿದ್ದಾರೆ.
ನಟನೆ ಮತ್ತು ಕಥೆಯ ಜತೆಗೆ ಶೈನ್ ಶೆಟ್ಟಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ‘ಶಂಕರಾಭರಣ’ ಸಿನಿಮಾ ಮೂಲಕ ಅವರು ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ. ರಂಗಸ್ಥಳ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ದಿವಾಕರ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಜಂಟಿಯಾಗಿ ಸಿನಿಮಾವನ್ನು ನಿರ್ಮಿಸಿದ್ದಾರೆ.
ಕರಾವಳಿ ಭಾಗದಿಂದ ಹಲವು ನಿರ್ಮಾಣ ಸಂಸ್ಥೆಗಳು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿವೆ. ರಕ್ಷಿತ್ ಶೆಟ್ಟಿ ಅವರ ಪರಂವ್ಹ ಸ್ಟುಡಿಯೋಸ್, ರಾಜ್ ಬಿ ಶೆಟ್ಟಿ ಅವರ ಲಾಫಿಂಗ್ ಬುದ್ಧ ಹಾಗೂ ರಿಷಬ್ ಶೆಟ್ಟಿ ಫಿಲ್ಮ್ಸ್ನಂತಹ ಸಂಸ್ಥೆಗಳ ಸಾಲಿಗೆ ಇದೀಗ ಶೈನ್ ಶೆಟ್ಟಿ ಅವರ ರಂಗಸ್ಥಳ ಸ್ಟುಡಿಯೋಸ್ ಕೂಡ ಸೇರ್ಪಡೆಯಾಗುತ್ತಿದೆ. ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿರುವ ರಂಗಸ್ಥಳ ಸ್ಟುಡಿಯೋಸ್ನ ಮೊದಲ ಹೆಜ್ಜೆ ‘ಶಂಕರಾಭರಣ’.
ಸಿನಿಮಾದಲ್ಲಿ ನಾಯಕಿಯಾಗಿ ತನ್ವಿ ರಾವ್ ಅಭಿನಯಿಸಿದ್ದಾರೆ. ಮಲಯಾಳಂನಲ್ಲಿ 17ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತನ್ವಿ ರಾವ್, ಇದೇ ಮೊದಲ ಬಾರಿಗೆ ಶೈನ್ ಶೆಟ್ಟಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಪತ್ನಿ ಕೃತಿ ಕೂಡ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
‘ಶಂಕರಾಭರಣ’ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಭಿನ್ನ ಟೈಟಲ್, ಬಸ್ನ್ನು ಕೇಂದ್ರವಾಗಿಟ್ಟುಕೊಂಡಿರುವ ಕಥೆ ಹಾಗೂ ಹಾರರ್ ಕಾಮಿಡಿ ಅಂಶಗಳೊಂದಿಗೆ ಸಿನಿಮಾ ಮೂಡಿಬಂದಿದ್ದು, ನವೆಂಬರ್ 20ರಂದು ಪ್ರೇಕ್ಷಕರ ಮುಂದೆ ಬರಲಿದೆ.



