ಮರಳಿ ಗ್ರಾಮಕ್ಕೆ ತೆರಳುವಾಗ ಅವಘಡ: ಗಂಭೀರ ಗಾಯಗೊಂಡ ಇಬ್ಬರು ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ
ಗದಗ: ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮುಗಿಸಿಕೊಂಡು ವಿದ್ಯಾರ್ಥಿಗಳನ್ನು ಭೈರನಹಟ್ಟಿ ಗ್ರಾಮಕ್ಕೆ ಕರೆದೊಯ್ಯುತ್ತಿದ್ದ ಶಾಲಾ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನರಗುಂದ ಪಟ್ಟಣದ ಪುಟ್ಟರಾಜ ಗವಾಯಿಗಳ ಸರ್ಕಲ್ ಬಳಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ನರಗುಂದ ಪಟ್ಟಣದ ರೊಟ್ರಾಕ್ಟ್ ಸ್ಕೂಲ್‌ನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮುಗಿಸಿಕೊಂಡು KA-17/D-8588 ನೋಂದಣಿ ಸಂಖ್ಯೆಯ ಮಹೀಂದ್ರ ಸುಪ್ರೋ ಮ್ಯಾಕ್ಸಿ ಕ್ಯಾಬ್ ಶಾಲಾ ವಾಹನವು ಭೈರನಹಟ್ಟಿಗೆ ತೆರಳುತ್ತಿದ್ದಾಗ, ಚಾಲಕ ಗೌಡೇಶ್ ಹುಡೇದ ವಾಹನವನ್ನು ನಿಯಂತ್ರಿಸಲಾಗದೆ ಹುಬ್ಬಳ್ಳಿ-ವಿಜಾಪುರ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಭೈರನಹಟ್ಟಿಯ ಅಭಿಷೇಕ್ ಗೌಡ (14), ಪ್ರಜ್ವಲ್ ಗೌಡ (14), ಶಿವು(15), ಮುದ್ದು ಪರಶುರಾಮ್ (10), ಸೌಮ್ಯ (14) ಹಾಗೂ ಗುರುನಾಥ್ (13) ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಅಭಿಷೇಕ್ ಗೌಡ ಹಾಗೂ ಪ್ರಜ್ವಲ್ ಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ನಾಲ್ವರು ನರಗುಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗೊಂಡ ವಿದ್ಯಾರ್ಥಿಗಳಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನ ಚಾಲಕ ಗೌಡೇಶ್ ಹುಡೇದ ಅವರಿಗೆ ಯಾವುದೇ ಗಾಯವಾಗಿಲ್ಲ ಎನ್ನಲಾಗಿದೆ. ಘಟನೆ ಕುರಿತು ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



