HomeGadag Newsಮಕ್ಕಳ ಕೈಗೆ ಮೊಬೈಲ್‌ಗಿಂತ ಸಾಹಿತ್ಯದ ಪುಸ್ತಕ ಬರಲಿ: ಚೆನ್ನಬಸಪ್ಪ ಅಕ್ಕಿ

ಮಕ್ಕಳ ಕೈಗೆ ಮೊಬೈಲ್‌ಗಿಂತ ಸಾಹಿತ್ಯದ ಪುಸ್ತಕ ಬರಲಿ: ಚೆನ್ನಬಸಪ್ಪ ಅಕ್ಕಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ಕೈಗೆ ಮೊಬೈಲ್‌ಗಿಂತ ಸಾಹಿತ್ಯದ ಪುಸ್ತಕಗಳು ಸಿಗುವಂತಾಗಬೇಕು. ಉತ್ತಮ ಓದುವ ಹವ್ಯಾಸವು ಮಕ್ಕಳ ಜ್ಞಾನ, ವ್ಯಕ್ತಿತ್ವ ಹಾಗೂ ಸೃಜನಶೀಲ ಬೆಳವಣಿಗೆಗೆ ಬಲವಾದ ಅಡಿಪಾಯವಾಗಿದ್ದು, ಮಕ್ಕಳು ಬಾಲ್ಯದಿಂದಲೇ ಸಾಹಿತ್ಯದ ಒಡನಾಟ ಬೆಳೆಸಿಕೊಳ್ಳಬೇಕು ಎಂದು ಚಿಂತಕ ಚೆನ್ನಬಸಪ್ಪ ಅಕ್ಕಿ ಹೇಳಿದರು.

ಬೆಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 8ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆ ವತಿಯಿಂದ ಆಯೋಜಿಸಿದ್ದ ಶ್ರಾವಣ ಮಾಸದ ‘ಅಮೃತ ಭೋಜನ–ಜ್ಞಾನ ಸಿಂಚನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಥೆ, ಕವನ, ನಾಟಕ, ಗಾದೆ ಹಾಗೂ ಶಿಶುಗೀತೆಗಳು ಮಕ್ಕಳಲ್ಲಿ ಜ್ಞಾನ ಮತ್ತು ಕಲ್ಪನಾಶಕ್ತಿಯ ಜತೆಗೆ ವಿಚಾರವಂತಿಕೆಯನ್ನು ಬೆಳೆಸುತ್ತವೆ. ಉತ್ತಮ ಸಾಹಿತ್ಯ ಓದುವ ಮೂಲಕ ಭಾಷಾ ಜ್ಞಾನವನ್ನು ರೂಢಿಸಿಕೊಳ್ಳಬೇಕು. ಓದುವುದು ಎಂದರೆ ಕೇವಲ ಅಕ್ಷರಗಳನ್ನು ಓದುವುದಲ್ಲ; ಓದಿದ್ದನ್ನು ಮನನ ಮಾಡಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದರು.

ಗದಗ ಜಿಲ್ಲೆ ಐತಿಹಾಸಿಕವಾಗಿ ವಿಶೇಷ ಸ್ಥಾನ ಹೊಂದಿದ್ದು, ಮಕ್ಕಳು ಜಿಲ್ಲೆಯ ಐತಿಹಾಸಿಕ ಸ್ಥಳಗಳ ಕುರಿತು ತಿಳಿದುಕೊಳ್ಳುವುದರ ಜತೆಗೆ ಅವುಗಳನ್ನು ನೇರವಾಗಿ ಕಂಡು ಅರ್ಥೈಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳಿಗೆ ಸಿಹಿ ವಿತರಿಸಿ ಮಾತನಾಡಿದ ಲೇಖಕಿ ಮಂಜುಳಾ ವೆಂಕಟೇಶಯ್ಯ, ಓದುವ ಹವ್ಯಾಸದಿಂದ ಜ್ಞಾನ, ಭಾಷಾ ಸಾಮರ್ಥ್ಯ, ಸೃಜನಶೀಲತೆ, ಏಕಾಗ್ರತೆ ಹಾಗೂ ಪದಸಂಪತ್ತು ವೃದ್ಧಿಯಾಗುತ್ತದೆ. ಮಕ್ಕಳು ಚಿಕ್ಕಚಿಕ್ಕ ಕವಿತೆ, ಕಥೆಗಳನ್ನು ಬರೆಯುವ ಮತ್ತು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಚಿಂತಕಿ ಪುಷ್ಪಲತಾ ಚಿಕ್ಕಣ್ಣವರ ಮಾತನಾಡಿ, ಉತ್ತಮ ಹವ್ಯಾಸ ಹಾಗೂ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಓದು-ಬರಹದಲ್ಲಿ ಯಶಸ್ಸು ಸಾಧಿಸಲು ಶಿಕ್ಷಕರು ಮತ್ತು ಪಾಲಕರ ಮಾರ್ಗದರ್ಶನ ಪಾಲಿಸಬೇಕು. ಟಿ.ವಿ. ಹಾಗೂ ಮೊಬೈಲ್ ಬಳಕೆಯಿಂದ ದೂರವಿದ್ದು, ಶರಣರ ತತ್ವಗಳು ಮತ್ತು ವಚನಗಳನ್ನು ಅರಿತುಕೊಳ್ಳಬೇಕು ಎಂದರು.

ಹಿರಿಯ ಚಿಂತಕಿ ಪುಷ್ಪಾ ಮಾಕಾಪೂರ ಮಾತನಾಡಿ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಶಾಲೆ ಹಾಗೂ ಮನೆಯ ಸಹಕಾರ ಅತ್ಯಗತ್ಯ. ಓದಿ, ಅರ್ಥೈಸಿಕೊಂಡು ತಪ್ಪಿಲ್ಲದಂತೆ ಬರೆಯುವ ಅಭ್ಯಾಸ ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸಿಗೆ ನೆರವಾಗುತ್ತದೆ. ಉತ್ತಮ ಓದು ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಖುಷಿ ಕಾಶಪ್ಪನವರ, ಮೀನಾಕ್ಷಿ ಎಣ್ಣಿ, ದಿವ್ಯಾ ಹಳ್ಳಿಕೇರಿ, ಶ್ರಾವಣಿ ಜಾಲಿಕಟ್ಟಿ ಹಾಗೂ ಸಂಗೀತಾ ಹಾವೇರಿ ವಚನ ಪ್ರಾರ್ಥನೆ ನೆರವೇರಿಸಿದರು. ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಎನ್.ಎಸ್. ಮಾಗಳ ಸ್ವಾಗತಿಸಿದರು. ಶಿಕ್ಷಕಿ ಐ.ವೈ. ಉಳ್ಳಾಗಡ್ಡಿ ನಿರೂಪಿಸಿದರು. ಆರ್.ಎಸ್. ರಾಜೋಳಿ ಪರಿಚಯಿಸಿದರು. ವಿದ್ಯಾ ಕಾಡಸಿದ್ಧೇಶ್ವರಮಠ ವಂದಿಸಿದರು.

ಪೂರ್ಣಿಮಾ ಸರ್ವಿ, ಸಾವಿತ್ರಿ ಬಿಜವಾಡ, ರಾಧಿಕಾ ಮುಳ್ಳಾಳ, ವೀಣಾ ನೀಲಗುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾಹಿತ್ಯ ಮಕ್ಕಳಲ್ಲಿ ಕೇವಲ ಜ್ಞಾನವನ್ನಷ್ಟೇ ಬೆಳೆಸುವುದಿಲ್ಲ; ಅವರ ಕಲ್ಪನಾಶಕ್ತಿ, ವಿಚಾರಶಕ್ತಿ ಹಾಗೂ ವ್ಯಕ್ತಿತ್ವವನ್ನು ರೂಪಿಸುತ್ತದೆ. ಓದುವ, ಬರೆಯುವ ಮತ್ತು ಮಾತನಾಡುವ ಕೌಶಲಗಳು ಭವಿಷ್ಯದಲ್ಲಿ ಅವರಿಗೆ ಸುಗಮ ದಾರಿ ತೋರಿಸುತ್ತವೆ.

— ಚೆನ್ನಬಸಪ್ಪ ಅಕ್ಕಿ, ಚಿಂತಕ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img