ವಿಜಯಸಾಕ್ಷಿ ಸುದ್ದಿ, ಡಂಬಳ: ಜಿಲ್ಲಾಡಳಿತ, ತಾಲೂಕು ಆಡಳಿತ, ಡಂಬಳ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಡಂಬಳ ಗ್ರಾಮದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರಿಂದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ 175 ಅರ್ಜಿಗಳು ಸಲ್ಲಿಕೆಯಾದವು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಯರಿಸ್ವಾಮಿ, ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವ ಉದ್ದೇಶದಿಂದ ಪ್ರಜಾಸೇವಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪಿಂಚಣಿ, ಪಹಣಿ, ಪಡಿತರ ಚೀಟಿ, ಕಂದಾಯ, ವಿದ್ಯುತ್, ಕುಡಿಯುವ ನೀರು, ಚರಂಡಿ ಸೇರಿದಂತೆ ವಿವಿಧ ಇಲಾಖೆಗಳ ಸೇವೆಗಳಿಗೆ ಸಂಬಂಧಿಸಿದ ಅರ್ಜಿಗಳು ಹಾಗೂ ದೂರುಗಳನ್ನು ಸ್ವೀಕರಿಸಲಾಯಿತು. ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿ ನಿಗದಿತ ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಅಧಿಕಾರಿ ಉದಯಕುಮಾರ ಯಲಿವಾಳ ಹಾಗೂ ಬಿಇಒ ಗಂಗಾಧರ ಅಣ್ಣಿಗೇರಿ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸುವುದು ಅಭಿಯಾನದ ಉದ್ದೇಶವಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಡಂಬಳ ಹೋಬಳಿಯ ವಿವಿಧ ಗ್ರಾಮಗಳಿಂದ ಸಲ್ಲಿಕೆಯಾದ ಅರ್ಜಿಗಳಲ್ಲಿ ಆಶ್ರಯ ಮನೆಗಳ ಬೇಡಿಕೆ ಹೆಚ್ಚಿನ ಸಂಖ್ಯೆಯಲ್ಲಿತ್ತು. ಡಂಬಳ ಎಪಿಎಂಸಿಯಲ್ಲಿ ವಿದ್ಯುತ್ ದೀಪ ಅಳವಡಿಕೆ, ಸಿದ್ಧಲಿಂಗಪ್ಪ ಪ್ಲಾಟ್ಗೆ ತೆರಳುವ ರಸ್ತೆಯ ಕಂಬಗಳಿಗೆ ಬೀದಿ ದೀಪ, ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ, ನೂತನ ಕೆರೆ ಮತ್ತು ಸಾರ್ವಜನಿಕ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಮೂಲಸೌಕರ್ಯ ಸಮಸ್ಯೆಗಳ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು.
ಮುಂಡರಗಿ ಉಪತಹಸೀಲ್ದಾರ್ ಬಿ.ಎಸ್. ಕನ್ನೂರ ಅವರು ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ, ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದರು.
ಸಮಾಜ ಕಲ್ಯಾಣ ಇಲಾಖೆಯ ಅಂತರಜಾತಿ ವಿವಾಹ ಪ್ರೋತ್ಸಾಹ ಯೋಜನೆಯಡಿ ಜಂತ್ಲಿ ಶಿರೂರ ಗ್ರಾಮದ ರವಿ ಕೋಟೆಪ್ಪ ಹೊಸಮನಿ ಮತ್ತು ರಕ್ಷಿತಾ ದಂಪತಿಗೆ ₹1.50 ಲಕ್ಷ ಮೊತ್ತದ ಠೇವಣಿ ಬಾಂಡ್ ವಿತರಿಸಲಾಯಿತು. ಅಂಗವಿಕಲರ ಹಾಗೂ ವೃದ್ಧಾಪ್ಯ ಮಾಶಾಸನದ ಮಂಜೂರಾತಿ ಪತ್ರಗಳನ್ನು ಸ್ಥಳದಲ್ಲಿಯೇ ನೀಡಲಾಯಿತು.
ಕಾರ್ಯಕ್ರಮಕ್ಕೆ ಕೆಲವು ಇಲಾಖೆಗಳ ಸ್ಥಳೀಯ ಅಧಿಕಾರಿಗಳು ಆಗಮಿಸದೆ ತಮ್ಮ ಸಿಬ್ಬಂದಿಯನ್ನು ಕಳುಹಿಸಿರುವುದು ಕಂಡುಬಂತು.
ಕಾರ್ಯಕ್ರಮದಲ್ಲಿ ಇಒ ವಿಜಯಕುಮಾರ ಬೆಣ್ಣಿ, ತೋಟಗಾರಿಕಾ ಹಿರಿಯ ಅಧಿಕಾರಿ ಮಹಮ್ಮದ್ ರಫೀಕ್ ತಾಂಬೋಟಿ, ಡಂಬಳ ಉಪ ತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ, ಅರಣ್ಯ ವಲಯ ಅಧಿಕಾರಿ ಮಂಜುನಾಥ ಮೇಗಲಮನಿ, ಪಶುವೈದ್ಯಾಧಿಕಾರಿ ಡಾ. ಎಸ್.ವಿ. ತಿಗರಿಮಠ, ಉಪತಹಸೀಲ್ದಾರ್ ಚಿದಾನಂದ ಬಳೂಟಗಿ, ಕಾರ್ಯಪಾಲಕ ಅಭಿಯಂತರ ನಾಗೇಂದ್ರ ಪಟ್ಟಶೆಟ್ಟರ್, ಸಿಪಿಐ ಅಯ್ಯನಗೌಡ ಪಾಟೀಲ, ಡಂಬಳ ಗ್ರಾಪಂ ಆಡಳಿತಾಧಿಕಾರಿ ಗುರುರಾಜ ಚವ್ಹಾಣ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಬದಲು ಜನರ ಸಮಸ್ಯೆಗಳನ್ನು ಅವರ ಬಳಿಯೇ ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ನೀಡುವುದು ಪ್ರಜಾಸೇವಾ ಆಂದೋಲನದ ಉದ್ದೇಶ. ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗೆ ರವಾನಿಸಿ, ನಿಯಮಾನುಸಾರ ಶೀಘ್ರ ಪರಿಹಾರ ಒದಗಿಸಲಾಗುವುದು.
— ಯರಿಸ್ವಾಮಿ, ತಹಸೀಲ್ದಾರ್



