ಶಿವಮೊಗ್ಗ: ನಗರದ ಹೊರವಲಯದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿದ್ದ 17 ವರ್ಷದ ಹೆಣ್ಣು ಹುಲಿ ‘ದಶಮಿ’ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ.
ವೃದ್ಧಾಪ್ಯದ ಕಾರಣದಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ದಶಮಿ, ಪಾರ್ಶ್ವವಾಯುವಿನಿಂದ ಬಳಲುತ್ತಿತ್ತು. ಕಳೆದ 10 ದಿನಗಳಿಂದ ಮೃಗಾಲಯದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ದಶಮಿ ಕೊನೆಯುಸಿರೆಳೆದಿದೆ.
ದಶಮಿ ಶಿವಮೊಗ್ಗ ಮೃಗಾಲಯದಲ್ಲೇ ಜನಿಸಿದ್ದು, ಕಳೆದ 17 ವರ್ಷಗಳಿಂದ ಮೃಗಾಲಯದ ಭಾಗವಾಗಿತ್ತು. ಇದೀಗ ದಶಮಿ ಮೃತಪಟ್ಟಿರುವುದು ಪ್ರವಾಸಿಗರು ಹಾಗೂ ಮೃಗಾಲಯದ ಸಿಬ್ಬಂದಿಯಲ್ಲಿ ಬೇಸರ ಮೂಡಿಸಿದೆ.
ಸೋಮವಾರ ಪಶುವೈದ್ಯಕೀಯ ಕಾಲೇಜಿನ ವೈದ್ಯರಿಂದ ದಶಮಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಮೃಗಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರಾಕ್ಷರ್ ತಿಳಿಸಿದ್ದಾರೆ.



