ಧಾರವಾಡ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ ಸಂಭವಿಸಿ ಶಾಲಾ ಮುಖ್ಯ ಶಿಕ್ಷಕರೊಬ್ಬರು ಮೃತಪಟ್ಟಿರುವ ಘಟನೆ ಧಾರವಾಡ ನಗರದ ಮಾಳಮಡ್ಡಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಮೃತರನ್ನು 59 ವರ್ಷದ ಐಐ ಮುಲ್ಲಾನವರ್ ಎಂದು ಗುರುತಿಸಲಾಗಿದೆ.
ಕಳೆದ ಶುಕ್ರವಾರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮುಲ್ಲಾನವರ್ ಅವರಿಗೆ ಏಕಾಏಕಿ ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಶಾಲೆಯಲ್ಲಿದ್ದ ಶಿಕ್ಷಕರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಂಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಶುಕ್ರವಾರ ಸಂಜೆ ಮುಖ್ಯ ಶಿಕ್ಷಕ ಮುಲ್ಲಾನವರ್ ನಿಧನರಾಗಿದ್ದು, ಕುಟುಂಬಸ್ಥರು ಶಿಕ್ಷಕರ ದಿನಾಚರಣೆಯಂದೇ ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕರ್ತವ್ಯದ ಮೇಲಿದ್ದಾಗಲೇ ಮುಖ್ಯ ಶಿಕ್ಷಕರು ಮೃತಪಟ್ಟಿರುವ ಘಟನೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಯಲ್ಲಿ ದುಃಖದ ವಾತಾವರಣ ಮೂಡಿಸಿದೆ.

