ಬೆಂಗಳೂರು: ಐಪಿಎಲ್‌ನ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಹೆಸರು ಬದಲಾಗಲಿದೆ ಎಂಬ ಸಾಮಾಜಿಕ ಜಾಲತಾಣಗಳ ವದಂತಿಗಳಿಗೆ ಇದೀಗ ತೆರೆ ಬಿದ್ದಿದೆ. ತಂಡದ ನೂತನ ಚೇರ್ಮನ್ ಆರ್ಯಮನ್ ಬಿರ್ಲಾ ಅವರು ಆರ್‌ಸಿಬಿ ತಂಡದ ಹೆಸರು ಬದಲಿಸುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಆರ್ಯಮನ್ ಬಿರ್ಲಾ, ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂಬ ಹೆಸರನ್ನು ಬದಲಿಸುವ ಯಾವುದೇ ಆಲೋಚನೆ ನಮ್ಮ ಮುಂದಿಲ್ಲ. ನಮಗೆ ಈ ಹೆಸರು ತುಂಬಾ ಇಷ್ಟ. ಇದೇ ಹೆಸರನ್ನು ಮುಂದುವರಿಸಲಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಆರ್‌ಸಿಬಿ ಕೇವಲ ತಂಡವಲ್ಲ, ಒಂದು ಬ್ರ್ಯಾಂಡ್:
ಆರ್‌ಸಿಬಿ ಕೇವಲ ಕ್ರಿಕೆಟ್ ತಂಡವಲ್ಲ. ಕೋಟ್ಯಂತರ ಅಭಿಮಾನಿಗಳ ಭಾವನೆ ಮತ್ತು ಬಲವಾದ ಕ್ರಿಕೆಟ್ ಬ್ರ್ಯಾಂಡ್ ಆಗಿದೆ. ವರ್ಷಗಳಿಂದ ತಂಡದೊಂದಿಗೆ ಬೆಸೆದುಕೊಂಡಿರುವ ಅಭಿಮಾನಿಗಳ ಪ್ರೀತಿ ಹಾಗೂ ಸಮುದಾಯದ ಬಾಂಧವ್ಯವನ್ನು ಹೊಸ ಆಡಳಿತ ಗೌರವಿಸುತ್ತದೆ ಎಂದು ಆರ್ಯಮನ್ ಬಿರ್ಲಾ ಹೇಳಿದ್ದಾರೆ.
ಹೀಗಾಗಿ ತಂಡದ ಹೆಸರು ಬದಲಾವಣೆಯ ಕುರಿತು ಹರಿದಾಡುತ್ತಿದ್ದ ಎಲ್ಲ ವದಂತಿಗಳಿಗೆ ಹೊಸ ಚೇರ್ಮನ್ ಅವರ ಹೇಳಿಕೆ ಸ್ಪಷ್ಟ ಉತ್ತರ ನೀಡಿದೆ. ಮುಂದಿನ ದಿನಗಳಲ್ಲೂ ಆರ್‌ಸಿಬಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಹೆಸರಿನಲ್ಲೇ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದೆ.
ವದಂತಿಗಳಿಗೆ ಕಾರಣವೇನು?
ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ಸಂಸ್ಥೆಯಿಂದ ಆರ್‌ಸಿಬಿ ಫ್ರಾಂಚೈಸಿಯನ್ನು ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಖರೀದಿಸಿದ ಬಳಿಕ ತಂಡದ ಹೆಸರಿನ ಕುರಿತು ವದಂತಿಗಳು ಹರಡಿದ್ದವು. ಬೋಲ್ಟ್ ವೆಂಚರ್ಸ್, ಬ್ಲ್ಯಾಕ್‌ಸ್ಟೋನ್ ಮತ್ತು ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಒಳಗೊಂಡ ಒಕ್ಕೂಟವು ಬರೋಬ್ಬರಿ 1.78 ಬಿಲಿಯನ್ ಡಾಲರ್ (ಸುಮಾರು ₹16,706 ಕೋಟಿ) ಮೊತ್ತಕ್ಕೆ ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ವರದಿಯಾಗಿತ್ತು.
ಮಾಲೀಕತ್ವ ಬದಲಾವಣೆಯ ಬೆನ್ನಲ್ಲೇ ಹೊಸ ಆಡಳಿತ ತಂಡದ ಹೆಸರು ಅಥವಾ ಬ್ರ್ಯಾಂಡ್ ಬದಲಾಯಿಸಬಹುದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದ್ದವು. ಆದರೆ ಇದೀಗ ಆರ್ಯಮನ್ ಬಿರ್ಲಾ ಅವರ ಸ್ಪಷ್ಟ ಹೇಳಿಕೆಯೊಂದಿಗೆ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಆರ್‌ಸಿಬಿ ತಂಡ:
ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್‌ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ರಿಚರ್ಡ್ ಗ್ಲೀಸನ್.
ಹೀಗಾಗಿ ಮಾಲೀಕತ್ವ ಬದಲಾದರೂ ಆರ್‌ಸಿಬಿಯ ಹೆಸರು, ಗುರುತು ಮತ್ತು ಅಭಿಮಾನಿಗಳೊಂದಿಗೆ ತಂಡ ಹೊಂದಿರುವ ಭಾವನಾತ್ಮಕ ಸಂಪರ್ಕವನ್ನು ಮುಂದುವರಿಸುವುದಾಗಿ ಹೊಸ ಆಡಳಿತ ಸ್ಪಷ್ಟಪಡಿಸಿದೆ.



