ಬೆಂಗಳೂರು: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಹತ್ವದ ಮಾಹಿತಿ ನೀಡಿದ್ದಾರೆ. ಗಣೇಶೋತ್ಸವದ ಸಂಪೂರ್ಣ ಜವಾಬ್ದಾರಿ ಆಯೋಜಕರದ್ದಾಗಿದ್ದು, ಪೊಲೀಸ್ ಇಲಾಖೆ ಹಾಗೂ ಜಿಬಿಎ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಅಗತ್ಯವಿರುವ ವಿವಿಧ ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ಪಡೆದ ಬಳಿಕವಷ್ಟೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇದರ ಜೊತೆಗೆ ಗಣೇಶೋತ್ಸವ ಹಾಗೂ ಮೆರವಣಿಗೆ ವೇಳೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳು ಮತ್ತು ಮಾರ್ಗಸೂಚಿಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸುವಂತಿಲ್ಲ. ನಿಗದಿಪಡಿಸಿರುವ ಸಮಯದೊಳಗೆ ಹಾಗೂ ಪೊಲೀಸರು ಅನುಮತಿ ನೀಡಿರುವ ನಿರ್ದಿಷ್ಟ ಮಾರ್ಗದಲ್ಲೇ ಗಣೇಶೋತ್ಸವದ ಮೆರವಣಿಗೆ ನಡೆಸಬೇಕು ಎಂದು ಸೂಚಿಸಲಾಗಿದೆ.
ಮೆರವಣಿಗೆ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ಸ್ವಯಂಸೇವಕರ ಪಟ್ಟಿಯನ್ನು ಮುಂಚಿತವಾಗಿ ಪೊಲೀಸರಿಗೆ ನೀಡುವುದು ಕಡ್ಡಾಯವಾಗಿರಲಿದೆ. ಮೆರವಣಿಗೆ ಸಾಗುವ ಮಾರ್ಗ ಹಾಗೂ ಗಣೇಶ ವಿಸರ್ಜನೆ ನಡೆಯುವ ಸ್ಥಳಗಳಲ್ಲಿ ಜಿಬಿಎ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಡಿಸಿಪಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ.
ಗಣೇಶೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಆಯೋಜಕರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಪೊಲೀಸ್ ಇಲಾಖೆ ಹಾಗೂ ಜಿಬಿಎ ವಿಧಿಸಿರುವ ನಿಯಮಗಳನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.



