ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂನಲ್ಲಿ ದರೋಡೆಗೆ ಯತ್ನಿಸಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಶುಕ್ರವಾರ ರಾತ್ರಿ ಸುಮಾರು 2.05ರ ವೇಳೆಗೆ ಕಾರಿನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಎಟಿಎಂ ಒಳಗೆ ನುಗ್ಗಿದ್ದಾರೆ. ಬಳಿಕ ಸಣ್ಣ ಕಬ್ಬಿಣದ ಸಲಾಕೆ ಬಳಸಿ ಎಟಿಎಂ ಯಂತ್ರದ ಮೇಲಿನ ಕವಚವನ್ನು ಮೀಟಿ ಕಳಚಿದ್ದಾರೆ.
ಎಟಿಎಂನ ಮತ್ತೊಂದು ಪದರವನ್ನು ತೆರೆಯಲು ಯತ್ನಿಸುತ್ತಿದ್ದ ವೇಳೆ ಯಾರೋ ಬರುತ್ತಿರುವಂತೆ ಭಾಸವಾದ ಹಿನ್ನೆಲೆಯಲ್ಲಿ ಆತಂಕಗೊಂಡ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ದೃಶ್ಯಗಳು ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.



