ಗದಗ: ಪಕ್ಷಕ್ಕೆ ಪೂರಕವಲ್ಲದ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಕ್ಷದ ಶಿಸ್ತಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರಸಭೆ ಸದಸ್ಯ ಹಾಗೂ ಬಿಜೆಪಿ ಮುಖಂಡ ರಾಘವೇಂದ್ರ ಯಳವತ್ತಿ ಅವರಿಗೆ ಬಿಜೆಪಿ ಗದಗ ನಗರ ಮಂಡಲದಿಂದ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.ವಿಶೇಷವೆಂದರೆ, ರಾಘವೇಂದ್ರ ಯಳವತ್ತಿ ಅವರು ಪಾಲ್ಗೊಂಡಿದ್ದ ಹೋರಾಟವು ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ, ಯುವಕರಿಗೆ ಉದ್ಯೋಗ, ರೈತರ ಹಿತದೃಷ್ಟಿಯಿಂದ ಬರಪೀಡಿತ ಪ್ರದೇಶ ಘೋಷಣೆ ಸೇರಿದಂತೆ ಜನೋಪಯೋಗಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆದಿದ್ದಾಗಿದೆ.
ಆಗಸ್ಟ್ 31, 2026ರಂದು ಗದಗದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಘವೇಂದ್ರ ಯಳವತ್ತಿ ಪಾಲ್ಗೊಂಡಿರುವುದು ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ ಎಂದು ಬಿಜೆಪಿ ನಗರ ಮಂಡಲದ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಪಕ್ಷದ ಜನಪ್ರತಿನಿಧಿಗಳು ಪಕ್ಷಕ್ಕೆ ಪೂರಕವಲ್ಲದ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳಬಾರದು ಎಂದು ಸೂಚಿಸಿರುವ ಬಿಜೆಪಿ, ಈ ಕುರಿತು ಏಳು ದಿನಗಳೊಳಗಾಗಿ ಸೂಕ್ತ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.
ಬಿಜೆಪಿ ಗದಗ ನಗರ ಮಂಡಲದ ಅಧ್ಯಕ್ಷ ಸುರೇಶ ಮರಳಪ್ಪನವರ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಚಿತ್ತರಗಿ ಮತ್ತು ಶಂಕರ ಕಾಕಿ ಅವರು ಜಂಟಿಯಾಗಿ ಈ ನೋಟಿಸ್ ನೀಡಿದ್ದಾರೆ.ಜನರ ಸಮಸ್ಯೆಗಾಗಿ ಹೋರಾಟವೂ ಪಕ್ಷ ವಿರೋಧಿ ಚಟುವಟಿಕೆಯೇ?ಗದಗದಲ್ಲಿ Gen Z Voters and Citizens Forum ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಸೇರಿದಂತೆ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು. ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಯುವಕರಿಗೆ ಉದ್ಯೋಗಾವಕಾಶ, ರೈತರ ಸಂಕಷ್ಟದ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗಿತ್ತು.ಈ ಹೋರಾಟದಲ್ಲಿ ಪಾಲ್ಗೊಂಡಿರುವುದನ್ನೇ ಬಿಜೆಪಿ ಪಕ್ಷದ ಶಿಸ್ತಿನ ಉಲ್ಲಂಘನೆ ಎಂದು ಪರಿಗಣಿಸಿ ನೋಟಿಸ್ ನೀಡಿರುವುದು ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ.ಸ್ಥಳೀಯವಾಗಿ ಜನರ ಸಮಸ್ಯೆಗಳಿಗಾಗಿ ನಡೆಯುವ ಹೋರಾಟದಲ್ಲಿ ಪಕ್ಷದ ಜನಪ್ರತಿನಿಧಿಗಳು ಭಾಗವಹಿಸುವುದು ತಪ್ಪೇ? ಅಥವಾ ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ನಡೆಯುವ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಶಿಸ್ತು ಉಲ್ಲಂಘನೆ ಎಂದು ಪರಿಗಣಿಸುವುದೇ? ಎಂಬ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ.ರಾಷ್ಟ್ರ ಮಟ್ಟದಲ್ಲಿ Gen Z ಹೋರಾಟದ ಬಗ್ಗೆ ಬದಲಾಗುತ್ತಿರುವ ನಿಲುವು:Gen Z ಹೋರಾಟ ಕೇವಲ ಗದಗ ಅಥವಾ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಉದ್ಯೋಗ, ಶಿಕ್ಷಣ, ನೇಮಕಾತಿ ಸೇರಿದಂತೆ ಯುವಕರ ವಿವಿಧ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ದೇಶದ ವಿವಿಧೆಡೆ ಯುವಕರು ಪ್ರತಿಭಟನೆ ನಡೆಸಿರುವುದು ಗಮನ ಸೆಳೆದಿದೆ.ಕರ್ನಾಟಕದಲ್ಲಿಯೂ 2025ರ ಸೆಪ್ಟೆಂಬರ್ನಲ್ಲಿ ಧಾರವಾಡದಲ್ಲಿ ಸರ್ಕಾರಿ ಇಲಾಖೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ನೇಮಕಾತಿಗೆ ವಯೋಮಿತಿ ಸಡಿಲಿಸಬೇಕು ಎಂದು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳು, ವಿದ್ಯಾರ್ಥಿಗಳು ಮತ್ತು ಯುವಕರು ಬೃಹತ್ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯಲ್ಲಿ Gen Z ಹೆಸರಿನ ಬ್ಯಾನರ್ಗಳು ಕಾಣಿಸಿಕೊಂಡಿದ್ದವು.ಆ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳ ವಾಗ್ದಾಳಿ ತೀವ್ರವಾಗಿತ್ತು. ಯುವಕರ ಉದ್ಯೋಗದ ಬೇಡಿಕೆಯನ್ನು ಮುಂದಿಟ್ಟುಕೊಂಡು ನಡೆದ ಪ್ರತಿಭಟನೆಗೆ ರಾಜಕೀಯ ಬೆಂಬಲವೂ ವ್ಯಕ್ತವಾಗಿತ್ತು. ಆದರೆ ಇದೇ Gen Z ಎಂಬ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಬಿಜೆಪಿ ಮುಖಂಡರು ಭಾಗವಹಿಸಿದಾಗ ಅದನ್ನು ಪಕ್ಷದ ಶಿಸ್ತು ಉಲ್ಲಂಘನೆ ಎಂದು ನೋಡುವುದು ವೈರುಧ್ಯವಲ್ಲವೇ ಎಂಬ ಚರ್ಚೆ ಗದಗದಲ್ಲಿ ಆರಂಭವಾಗಿದೆ.ಮೋದಿ ಸರ್ಕಾರದಿಂದ Gen Zಗೆ AI ತರಬೇತಿ ಘೋಷಣೆ:ಇನ್ನೊಂದೆಡೆ, ಇತ್ತೀಚಿನ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುವಕರನ್ನು ಕೇಂದ್ರೀಕರಿಸಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಒಂದು ಕೋಟಿ ಯುವಕರಿಗೆ ಕೃತಕ ಬುದ್ಧಿಮತ್ತೆ (AI) ಕೌಶಲ ತರಬೇತಿ ನೀಡುವ ಯೋಜನೆಯನ್ನು ಘೋಷಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ಯುವಕರಿಗೆ ಉಚಿತ ಆನ್ಲೈನ್ ಕೋಚಿಂಗ್ ನೀಡುವ ಕ್ರಮವನ್ನೂ ಪ್ರಕಟಿಸಿದ್ದಾರೆ.ಅಂದರೆ, ದೇಶದ ಯುವಜನರ ಉದ್ಯೋಗ, ಕೌಶಲ ಮತ್ತು ಭವಿಷ್ಯದ ಬಗ್ಗೆ Gen Z ವಿಚಾರಗಳು ರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಮುಖ ರಾಜಕೀಯ ಹಾಗೂ ಆಡಳಿತಾತ್ಮಕ ಚರ್ಚೆಯ ವಿಷಯವಾಗಿವೆ.‘ಪ್ರತಿಭಟಿಸಿದರೆ ದೇಶದ್ರೋಹಿಗಳಲ್ಲ’ ಎಂದಿದ್ದ ಭಾಗವತ್:ಇದರ ನಡುವೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು Gen Z ಹೋರಾಟಗಾರರ ಕುರಿತು ನೀಡಿದ ಹೇಳಿಕೆಯೂ ಗಮನ ಸೆಳೆದಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂಬ ಕಾರಣಕ್ಕೆ ಯುವಕರನ್ನು ದೇಶದ್ರೋಹಿಗಳು ಎಂದು ಕರೆಯಬಾರದು; Gen Z ಮತ್ತು Gen Alpha ದೇಶದ ಬಗ್ಗೆ ಪ್ರಾಮಾಣಿಕತೆ, ದೇಶಭಕ್ತಿ ಹಾಗೂ ಸೇವೆಯ ಮನೋಭಾವ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.ಪ್ರತಿಭಟನೆ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದ್ದು, ಯುವಕರ ಅಸಮಾಧಾನವನ್ನು ಅರ್ಥಮಾಡಿಕೊಂಡು ಅವರ ಸಮಸ್ಯೆಗಳನ್ನು ಚರ್ಚೆಯ ಮೂಲಕ ಪರಿಹರಿಸಬೇಕು ಎಂಬ ನಿಲುವನ್ನು ಭಾಗವತ್ ವ್ಯಕ್ತಪಡಿಸಿದ್ದರು.ಅವರ ಈ ಹೇಳಿಕೆ ದೇಶಾದ್ಯಂತ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಯುವಕರ ಪ್ರತಿಭಟನೆಯನ್ನು ಕೇವಲ ವಿರೋಧದ ದೃಷ್ಟಿಯಿಂದ ನೋಡುವ ಬದಲು, ಅದರ ಹಿಂದಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂಬ ಸಂದೇಶವೂ ಇದರಲ್ಲಿ ಅಡಕವಾಗಿತ್ತು.ಗದಗದ ನೋಟಿಸ್ ಇದೀಗ ಚರ್ಚೆಯ ಕೇಂದ್ರಬಿಂದು:ರಾಷ್ಟ್ರಮಟ್ಟದಲ್ಲಿ Gen Z ಯುವಕರ ಬೇಡಿಕೆಗಳು, ಪ್ರತಿಭಟನೆಯ ಹಕ್ಕು ಹಾಗೂ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಗದಗದಲ್ಲಿ ಅದೇ ರೀತಿಯ ಯುವಕರ ಹೋರಾಟದಲ್ಲಿ ಭಾಗವಹಿಸಿದ ಬಿಜೆಪಿ ನಗರಸಭೆ ಸದಸ್ಯನಿಗೆ ಪಕ್ಷದಿಂದ ಶೋಕಾಸ್ ನೋಟಿಸ್ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.ಜನರ ಕುಡಿಯುವ ನೀರು, ಯುವಕರ ಉದ್ಯೋಗ, ರೈತರ ಸಂಕಷ್ಟ ಮತ್ತು ಬರ ಘೋಷಣೆಯಂತಹ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆದ ಹೋರಾಟದಲ್ಲಿ ಜನಪ್ರತಿನಿಧಿಯೊಬ್ಬರು ಭಾಗವಹಿಸಿರುವುದು ಜನಪರ ಕಾಳಜಿಯೇ ಅಥವಾ ಪಕ್ಷದ ಶಿಸ್ತು ಉಲ್ಲಂಘನೆಯೇ ಎಂಬುದನ್ನು ಇದೀಗ ರಾಘವೇಂದ್ರ ಯಳವತ್ತಿ ಅವರ ಉತ್ತರವೇ ನಿರ್ಧರಿಸಲಿದೆ.ಏಳು ದಿನಗಳೊಳಗೆ ರಾಘವೇಂದ್ರ ಯಳವತ್ತಿ ಅವರು ನೀಡಲಿರುವ ಸ್ಪಷ್ಟನೆ ಇದೀಗ ಗದಗ ಬಿಜೆಪಿಯಲ್ಲಷ್ಟೇ ಅಲ್ಲ, Gen Z ಹೋರಾಟದ ಕುರಿತಾಗಿ ನಡೆಯುತ್ತಿರುವ ದೊಡ್ಡ ರಾಜಕೀಯ ಚರ್ಚೆಯಲ್ಲೂ ಕುತೂಹಲ ಮೂಡಿಸಿದೆ.ಈ ಕುರಿತು ಗದಗ ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಅವರನ್ನು ಸಂಪರ್ಕಿಸಿದಾಗ, ಪಕ್ಷ ಕೈಗೊಳ್ಳುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ ಇರುವುದು. ಅಂದು ಬೇರೆಬೇರೆ ಸಂಘಟನೆಗಳ ವೇದಿಕೆ ರೂಪಿಸಿರುವ ಹೋರಾಟದಲ್ಲಿ ಪಾಲ್ಗೊಂಡ ಕಾರಣಕ್ಕಾಗಿ ನೋಟಿಸ್ ನೀಡಲಾಗಿದೆ. ಜೊತೆಗೆ zen Z ಹೋರಾಟಕ್ಕೆ ನಮ್ಮ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು.
Trending Now



